ಲಕ್ನೋ, ಜೂ 18 (DaijiworldNews/PY) : ಮದುವೆ ಮನೆಯಲ್ಲಿ ಸಿಹಿ ತಿಂಡಿಗಾಗಿ ಜಗಳವಾಗಿ ವರ ತನ್ನ ಬಾಮೈದುನನ್ನೇ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಹತ್ಯೆಯಾದ ಬಾಲಕನನ್ನು ಪ್ರನ್ಶು (9) ಎನ್ನಲಾಗಿದೆ.
ವರ ಮನೋಜ್ ಕುಮಾರ್ ಹಾಗೂ ಆತನ ಇಬ್ಬರು ಸ್ನೇಹಿತರು ಸೋಮವಾರ ರಾತ್ರಿ ವಧುವಿನ ಮನೆಯವರೊಂದಿಗೆ ಸ್ವೀಟ್ಗಾಗಿ ಕ್ಯಾತೆ ತೆಗೆದಿದ್ದು, ಜೋರಾಗಿ ಗಲಾಟೆ ಆರಂಭಿಸಿದ್ದಾರೆ. ಈ ಸಂದರ್ಭ ಯುವಕರನ್ನು ಸಮಾಧಾನಪಡಿಸುವ ಸಲುವಾಗಿ ಹಿರಿಯರು ಮಧ್ಯಪ್ರವೇಶ ಮಾಡಿದ್ದು, ಈ ವೇಳೆ ಅವರು ಗುಂಡು ಹಾರಿಸಿದ್ದಾರೆ. ನನ್ನ ಸೋದರ ಮಾವ ಭಾರೀ ಅನಾಹುತದಿಂದ ಪಾರಗಿದ್ದಾರೆ ಎಂದು ವಧುವಿನ ಸಹೋದರ ಪುನೀತ್ ತಿಳಿಸಿದ್ದಾರೆ.
ಸಹೋದರ ಪ್ರನ್ಶು, ಮನೋಜ್ ಹಾಗೂ ಆತನ ಗೆಳೆಯರಿಗೆ ನೀರು ಕೊಡುತ್ತಿದ್ದ ಸಂದರ್ಭ ಅವರು ಸಿಟ್ಟಿನಿಂದ ಹೊಡೆಯಲು ಮುಂದಾಗಿದ್ದರು. ಅಲ್ಲದೇ, ಆತನನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಕಾರಿನಲ್ಲಿ ಕರೆದೊಯ್ಯುತ್ತಿರುವ ಸಂದರ್ಭ ಅವರನ್ನು ತಡೆಯಲು ಇಬ್ಬರು ಮಹಿಳೆಯರೂ ಹಾಗೂ ಬಾಲಕಿ ಓಡಿದ್ದು, ಅವರಿಗೂ ಗಂಭೀರ ಗಾಯಗಳಾಗಿವೆ.
ಮನೋಜ್ಗೆ ಪ್ರನ್ಶುವನ್ನು ವಾಪಾಸ್ ಕರೆದುಕೊಂಡು ಬರುವಂತೆ ಹಲವು ಬಾರಿ ಕರೆ ಮಾಡಿದರೂ ಪ್ರಯೋಜನವಾಗಿಲಿಲ್ಲ. ಆದರೆ, ನಸುಕಿನ ಜಾವ 3 ಗಂಟೆ ಸುಮಾರಿಗೆ ನನ್ನ ಸಹೋದರನ ಮೃತದೇಹವನ್ನು ಗ್ರಾಮದಲ್ಲಿ ಬಿಸಾಕಿ ಪರಾರಿಯಾಗಿದ್ದಾರೆ ಎಂದು ಪುನೀತ್ ಹೇಳಿದ್ದಾರೆ.
ಪ್ರನ್ಶುವಿನ ಕುತ್ತಿಗೆ ಹಾಗೂ ಮುಖದ ಮೇಲೆ ಗಂಭೀರವಾದ ಗಾಯಗಳಾಗಿದ್ದು, ಈ ಕಡೆ ಗಾಯಗೊಂಡಿರುವ ವಿಮ್ಲಾ(50), ಮಿಥಿಲೇಶ್(35) ಹಾಗೂ ಸಪ್ನಾ(17) ಅವರನ್ನು ಲೋಹಿಯಾ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಮಿಥಿಲೇಶ್ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಧುವಿನ ತಂದೆ ರಾಂಪಲ್ ಜಾತವ್ ಅವರು ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಮನೋಜ್ ಕುಮಾರ್ ರಸ್ತೆ ಬದಿಯಲ್ಲಿದ್ದ ಜನರನ್ನು ಲೆಕ್ಕಿಸದೇ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ . ಇದರ ಪರಿಣಾಮ ನಮ್ಮ ಸಂಬಂಧಿಕರಲ್ಲಿ ಮೂವರು ಮಹಿಳೆಯರು ಗಾಯಗೊಂಡಿದ್ದು ಅಲ್ಲದೇ, ಮನೋಜ್ ಕುಮಾರ್ ಹಾಗೂ ಆತನ ಗೆಳೆಯರು ಸೇರಿ ನನ್ನ 9 ವರ್ಷದ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ವಿಚಾರವಾಗಿ ಎರಡು ಕಡೆಯ ದೂರುಗಳನ್ನು ಆಲಿಸಿ ಬಳಿಕ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಲ್ ಅಧಿಕಾರಿ ರಾಜ್ ವೀರ್ ಸಿಂಗ್ ತಿಳಿಸಿದ್ದಾರೆ.