ಬೆಂಗಳೂರು, ಜೂ 18 (DaijiworldNews/PY) : ಬಿಜೆಪಿಗೆ ನಾನು ಹೊಸಬ. ನನಗೆ ಬಿಜೆಪಿಯ ಆಳ ಅಗಲ ತಿಳಿದಿಲ್ಲ. ನನ್ನೊಂದಿಗೆ ಬಂದವರೆಲ್ಲಾ ಈಜಿ ದಡ ಸೇರಿದ್ದಾರೆ. ನಾನು ಇನ್ನೂ ಸೇರಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ನಾನು ಹಿಂದುಳಿದ ವರ್ಗದ ಹಿರಿಯ ನಾಯಕ. ಟಿಕೆಟ್ ಏಕೆ ತಪ್ಪಿಸಿದ್ದಾರೆ ಎಂದು ಗೊತ್ತಿಲ್ಲ. ಈ ವಿಚಾರದ ಬಗ್ಗೆ ನಾನು ಹತಾಷನಾಗಿಲ್ಲ. ನಮ್ಮ ನಾಯಕರಾದ ಬಿಎಸ್ವೈ ಅವರ ತ್ಯಾಗಕ್ಕೆ ಪ್ರತಿಫಲ ಸಿಗುತ್ತದೆ. ಬಿಎಸ್ವೈ ಅವರ ಮೇಲೆ ಈಗಲೂ ಭರವಸೆ ಇದೆ ಎಂದರು.
ರಾಜ್ಯ ನಾಯಕರು ನಾಲ್ಕು ಜನೆರ ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳುಹಿಸಿದ್ದರು. ಆದರೆ, ಇದೀಗ ನನ್ನ ಹೆಸರನ್ನು ಕೈ ಬಿಡಲಾಗಿದೆ. ಯಡುಯೂರಪ್ಪ ಅವರು ಕೊನೆಯ ಘಳಿಗೆಯವರೆಗೂ ನನ್ನ ಪರವಾಗಿ ಪ್ರಯತ್ನ ಮಾಡಿದ್ದಾರೆ. ಆದರೆ, ನನಗೆ ದೆಹಲಿಯಲ್ಲಿ ಟಿಕೆಟ್ ತಪ್ಪಿದೆ. ನಾನು ಈ ಹಂತಕ್ಕೆ ಬರಬೇಕಾದರೆ ಇಂತಹ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದೇನೆ. ಸಿಎಂ ಅವರ ಮೇಲೆ ನನಗೆ ಈಗಲೂ ನಂಬಿಕೆ ಇದೆ. ಕಾದು ನೋಡೋಣ ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಯಾರ ಕೈವಾಡವಿದೆ ಎಂದು ತಿಳಿದಿಲ್ಲ. ಈ ಬಗ್ಗೆ ವೈಯುಕ್ತಿಕವಾಗಿ ನನಗೆ ಬೇಸರವಿಲ್ಲ. ಆದರೆ, ಹಿರಿಯ ಹಿಂದುಳಿದ ನಾಯಕನಿಗೆ ಏಕೆ ಟಿಕೆಟ್ ತಪ್ಪಿತು ಎನ್ನುವುದಕ್ಕೆ ಬೇಸರವಿದೆ. ಈಗ ಎಂಎಲ್ಸಿ ಟಿಕೆಟ್ ಸಿಕ್ಕಿಲ್ಲ ಎಂದು ಹತಾಶನಾಗಿಲ್ಲ. ನನ್ನ ಧ್ವನಿಯನ್ನೂ ಯಾರಿಂದಲೂ ಅಡಗಿಸಲು ಸಾಧ್ಯವಿಲ್ಲ. ಯಾವಾಗಲೂ ವಿಶ್ವನಾಥ್ ಧ್ವನಿ ಮಾರ್ಧನಿಸುತ್ತಿರುತ್ತದೆ ಎಂದು ಹೇಳಿದ್ದಾರೆ.