ಬೆಂಗಳೂರು, ಜೂ 18 (DaijiworldNews/PY) : ಇಂದು (ಜೂ.18)ರಂದು ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಕೊನೆಯ ದಿನ ಬಿಜೆಪಿಯಿಂದ 4, ಕಾಂಗ್ರೆಸ್ ಪಕ್ಷದಿಂದ 2 ಹಾಗೂ ಜೆಡಿಎಸ್ ಪಕ್ಷದಿಂದ ಒಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಹಾಗಾಗಿ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
ಇದೇ ಜೂನ್ 29ರಂದು ವಿಧಾನ ಪರಿಷತ್ನ 7 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿತ್ತು. ಆದರೆ, 7 ಸ್ಥಾನಗಳಿಗೆ 7 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ ಅಭ್ಯರ್ಥಿಗಳ ಆಯ್ಕೆ ಅವಿರೋಧವಾಗಲಿದೆ.
ಮಸ್ಕಿ ಹಾಗೂ ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಬಾಕಿ ಇದೆ. ವಿಧಾನಸಭೆಯಲ್ಲಿ ಬಿಜೆಪಿ 116, ಕಾಂಗ್ರೆಸ್ 68 ಹಾಗೂ ಜೆಡಿಎಸ್ 34 ಸದಸ್ಯರ ಬೆಂಬಲ ಹೊಂದಿದ್ದು, ಸದ್ಯ ವಿಧಾನಸಭೆಯ ಬಲಾಬಲದಂತೆ ಒಬ್ಬ ಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಲು 33 ಶಾಸಕ ಬೆಂಬಲ ಅಗತ್ಯವಿತ್ತು. ಹಾಗಾಗಿ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ತಲಾ 4, 2 ಹಾಗೂ 1 ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸಾಧ್ಯವಾಗುತ್ತಿತ್ತು. ಇದೀಗ ಅಷ್ಟೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆ ಕಾರಣದಿಂದ ಚುನಾವಣೆ ನಡೆಯದೇ ಅವಿರೋಧವಾಗಿ ಆಯ್ಕೆಯಾಗಿದೆ.
ಮಾಜಿ ಸಚಿವರಾದ ಎಂಟಿಬಿ ನಾಗರಾಜ್, ಆರ್. ಶಂಕರ್, ಮಾಜಿ ಶಾಸಕ ಸುನಿಲ್ ವಲ್ಯಾಪುರೆ ಹಾಗೂ ಪಕ್ಷದ ಮುಖಂಡ ಪ್ರತಾಪ್ ಸಿಂಹ ನಾಯಕ್ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಬಿ.ಕೆ. ಹರಿಪ್ರಸಾದ್ ಹಾಗೂ ನಸೀರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದು, ಇಂಚರ ಗೋವಿಂದರಾಜು ಜೆಡಿಎಸ್ನಿಂದ ನಾಮಪತ್ರ ಸಲ್ಲಿಸಿದ್ದಾರೆ.