ನವದೆಹಲಿ, ಜೂ 18 (DaijiworldNews/PY) : ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯೋಧರು ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆ ಮುಳ್ಳಿನ ತಂತಿ ಸುತ್ತಿದ್ದ ಕಬ್ಬಿಣದ ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ. ಈ ಘರ್ಷಣೆಯಲ್ಲಿ ಮೃತಪಟ್ಟ ಭಾರತೀಯ ಯೋಧರ ಶವಗಳ ತಲೆಯನ್ನು ಕತ್ತರಿಸಿ ವಿಕೃತಿ ಮೆರೆದಿದ್ದು, ಈ ಕಾರಣದಿಂದ ಮತ್ತೆ ಲಡಾಖ್ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಸೋಮವಾರ ರಾತ್ರಿ ನಡೆದ ಈ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದು, 76ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದರು. ಉಭಯ ರಾಷ್ಟ್ರಗಳ ಮಿಲಿಟರಿ ಪಡೆಗಳ ಮೇಜರ್ ಜನರಲ್ ಮಟ್ಟದ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಗುರುವಾರ ನಡೆದ ಪ್ರಥಮ ಸುತ್ತಿನ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರುವಲ್ಲಿ ವಿಫಲವಾಗಿದ್ದು, ಎರಡನೇ ಸುತ್ತಿನ ಮಾತುಕತೆ ಶುರುವಾಗಿದೆ. ಭಾರತೀಯ ಪಾಳೆಯದಲ್ಲಿ ಚೀನಿ ಯೋಧರು ಮಾಡಿರುವ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ ಈ ಹಿನ್ನೆಲೆ ಯಾವುದೇ ಕ್ಷಣದಲ್ಲಿಯೂ ಇನ್ನೊಂದು ಸುತ್ತಿನ ಘರ್ಷಣೆ ಏರ್ಪಡುವ ವಾತಾವರಣ ಅಲ್ಲಿ ನಿರ್ಮಾಣವಾಗಲಿದೆ.
ಈ ಕಾರಣದಿಂದಾಗಿ ಉಭಯ ರಾಷ್ಟ್ರಗಳ ಸೇನಾಪಡೆಗಳು ಪ್ಯಾಂಗಾಂಗ್ ತ್ಸೊ ವಲಯದಲ್ಲಿ ಮತ್ತೊಂದು ಸುತ್ತಿನ ಘರ್ಷಣೆ ಆಗದಂತೆ ನಿಯಂತ್ರಿಸಲು ಪ್ರಯತ್ನಿಸಿರುವುದಾಗಿ ಹೇಳಲಾಗುತ್ತಿದೆ. ಈ ಭಾಗದಲ್ಲಿ ಉಭಯ ರಾಷ್ಟ್ರಗಳ ಯೋಧರು ಕಳೆದ 40 ದಿನಗಳಲ್ಲಿ ಘರ್ಷಣೆ ನಡೆಸಿದ್ದು, ಪ್ಯಾಂಗಾಂಗ್ ತ್ಸೊ ವಲಯದಲ್ಲಿ ಪರಿಸ್ಥಿಯು ತೀವ್ರಾ ಉದ್ವಿಗ್ನವಾಗಿರುವುದಾಗಿ ಹೇಳಲಾಗುತ್ತಿದೆ.