ನವದೆಹಲಿ, ಜೂ 18 (DaijiworldNews/PY) : ಜೂನ್ 20ರಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆಯನ್ನು ಉದ್ಘಾಟನೆ ಮಾಡುವುದಾಗಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದು, ಇದರ ಬೆನ್ನಲ್ಲೇ, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆಯ ವಿವರಗಳನ್ನು ನೀಡುವುದಕ್ಕಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಈ ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆಯಲ್ಲಿ, ವಲಸೆ ಕಾರ್ಮಿಕರಿಗೆ ನೆರವಾಗುವ ಸಲುವಾಗಿ 125 ದಿನಗಳವಧಿಯಲ್ಲಿ ಸುಮಾರು 50,000 ಕೋಟಿ ರೂಪಾಯಿ ಮೌಲ್ಯದ ಮೂಲಸೌಕರ್ಯವನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಈ ಮೂಲಸೌಕರ್ಯಕ್ಕಾಗಿ ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ ಹಾಗೂ ಒಡಿಶಾಗಳ 116 ಜಿಲ್ಲೆಗಳ ಪೈಕಿ ಪ್ರತಿ ಜಿಲ್ಲೆಯಲ್ಲಿ ತಲಾ 25,000ಕ್ಕೂ ಅಧಿಕ ವಲಸೆ ಕಾರ್ಮಿಕರನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲದೇ, ವಲಸೆ ಕಾರ್ಮಿಕರಿಗೆ ಕೆಲಸ ಒದಗಿಸುವ ನಿಟ್ಟಿನಲ್ಲಿ ಅವರ ಬದುಕಿಗೊಂದು ದಾರಿ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ರಾಷ್ಟ್ರೀಯ ಹೆದ್ದಾರಿ, ಗಣಿ, ಕುಡಿವ ನೀರು ಮತ್ತು ನೈರ್ಮಲ್ಯ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್, ರಸ್ತೆ ಸಾರಿಗೆ, ಪರಿಸರ, ರೈಲ್ವೆ, ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ಹೊಸ ಹಾಗೂ ನವೀಕರಿಸಬಹುದಾದ ಇಂಧನ ಟೆಲಿಕಾಂ, ಕೃಷಿ ಇಲಾಖೆ, ಗಡಿ ರಸ್ತೆಗಳು ಸೇರಿ 12 ವಿವಿಧ ಸಚಿವಾಲಯಗಳ ಸಹಯೋಗದಲ್ಲಿ ಈ ಎಲ್ಲಾ ಕಾಮಗಾರುಗಳು ನಡೆಯುತ್ತವೆ ಎಂದು ಸರ್ಕಾರ ತಿಳಿಸಿದೆ.