ಬೆಂಗಳೂರು, ಜೂ 18 (DaijiworldNews/PY) : 2020ರ ಪಿಯುಸಿ ಪರೀಕ್ಷೆಗಳು ಯಾವುದೇ ಅಹಿತಕರ ಘಟನೆಯಿಲ್ಲದೇ, ಪ್ರಶ್ನೆ ಪತ್ರಿಕೆಗಳ ಸೋರಿಕೆ ಇಲ್ಲದೇ, ಉತ್ತರ ಪತ್ರಿಕೆಗಳ ನಕಲು ಪ್ರಕರಣವಿಲ್ಲದೇ ಯಶಸ್ವಿಯಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ನಾನು ಇಂದು ಎರಡು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದೆ. ( ಜಯನಗರದ ಎನ್.ಎಂ.ಕೆ.ಆರ್.ವಿ ಹಾಗೂ ಕೆಂಗೇರಿ ಉಪನಗರದ ಶೇಷಾದ್ರಿಪುರಂ ಕಾಲೇಜು). ಈ ಎರಡೂ ಕೇಂದ್ರಗಳ ಪ್ರತಿ ಕೊಠಡಿಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯುವ ವ್ಯವಸ್ಥೆಯನ್ನು ಗಮನಿಸಿದೆ. ಮಕ್ಕಳು ಮಾಸ್ಕ್ ಧರಿಸಿದ್ದು, ತಲ್ಲೀನರಾಗಿ ಪರೀಕ್ಷೆ ಬರೆಯುತ್ತಿರುವುದು ಎದ್ದು ಕಂಡಿತ್ತು. ಪರೀಕ್ಷಾ ಕೇಂದ್ರದ ಹೊರಗಡೆಯೂ ಕೂಡಾ ಸಾಮಾಜಿಕ ಅಂತರವನ್ನು ಕಾಪಾಡಲು ವೃತ್ತಗಳನ್ನು ಹಾಕಿ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಆದರೆ, ತಮ್ಮ ಮಕ್ಕಳು ಕಟ್ಟಡದೊಳಗೆ ಪ್ರವೇಶಿಸುವವರೆಗೂ ತಾವು ಜೊತೆಯಾಗಿರಬೇಕು ಎಂದು ಕೆಲ ಪೋಷಕರು ಬಂದಿದ್ದುಸ್ಪಲ್ಪ ವ್ಯತ್ಯಾಸಕ್ಕೆ ಕಾರಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾ ಮೇಲ್ವಿಚಾರಕರು ಕೂಡಾ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಧರಿಸಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಒಂದು ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣೆಯ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಟೆಂಪರೇಚರ್ ಸ್ವಲ್ಪ ಹೆಚ್ಚು ಕಂಡುಬಂದ ಕಾರಣ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಉತ್ತರ ಬರೆಯಲು ಅವಕಾಶ ನೀಡಲಾಗಿದೆ. ರಾಜ್ಯದ 1016 ಕೇಂದ್ರಗಳ ಪೈಕಿ ಶೇ.90 ರಷ್ಟು ಕೇಂದ್ರಗಳಲ್ಲಿ ನಾವು ಮಾಡಿರುವ ವ್ಯವಸ್ಥೆಯಲ್ಲಿ ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷಾ ಕೇಂದ್ರಗಳ ಹೊರಗರ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲು ಸಹಕಾರ ನೀಡಿದ್ದಾರೆ.
ಈ ಯಶಸ್ವಿಗೆ ಕಾರಣೀಕರ್ತರಾದ ಪಿಯುಸಿ ನಿರ್ದೇಶಕರಿಗೆ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ, ಪರೀಕ್ಷೆ ಮೇಲ್ವಿಚಾರಕರಿಗೆ, ರಾಜ್ಯದ ಆರೋಗ್ಯ-ಸಾರಿಗೆ-ಗೃಹ ಇಲಾಖೆಗಳಿಗೆ, ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಹೃತ್ಫೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.