ಬೆಂಗಳೂರು, ಜೂ 18 (DaijiworldNews/SM): ಕಾಂಗ್ರೆಸ್, ಜೆಡಿಎಸ್ ಇದೀಗ ಬಿಜೆಪಿ. ಹೀಗೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ತಮ್ಮಿಚ್ಚೆಯಂತೆ ಜಿಗಿಯುತ್ತಿದ್ದ ಮಾಜಿ ಸಚಿವ ವಿಶ್ವನಾಥ್ ಗೆ ಮತ್ತೆ ನಿರಾಸೆಯಾಗಿದೆ. ಈ ನಡುವೆ ವಿಶ್ವನಾಥ್ ಮಾಜಿ ಸಿಎಂಗಳ ವಿರುದ್ಧ ನೀಡಿದ್ದ ಹೇಳಿಕೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.
ಮಾಜಿ ಸಚಿವ ಹೆಚ್. ವಿಶ್ವನಾಥ್ ಅವರಿಗೆ ವಿಧಾನಪರಿಷತ್ ಚುನಾವಣೆಯ ಟಿಕೆಟ್ ತಪ್ಪಿಸಲು ನಾನು ಬಿಜೆಪಿ ಹೈಕಮಾಂಡಾ? ಅವನಿಗೆ ಬುದ್ದಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ, ಕುಮಾರಸ್ವಾಮಿ ಕಾರಣ ಎಂಬ ಹೇಳಿಕೆಯನ್ನು ವಿಶ್ವನಾಥ್ ಈ ಹಿಂದೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯನವರು, ಬಿಜೆಪಿಗೂ ನಾನೇ ಹೈಕಮಾಂಡಾ, ಅವರಿಗೇನೂ ಬುದ್ದಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ನನ್ನ ಮತ್ತು ಡಿಕೆ ಶಿವಕುಮಾರ್ ಅವರ ಅಭಿಪ್ರಾಯ ಕೇಳಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಲ್ಲಿ ಅನುಭವಸ್ಥರು ಇರಬೇಕು. ಹಾಗಾಗಿ ಹಿರಿಯರನ್ನು ಪರಿಗಣಿಸಿದೆ. ಬಿ.ಕೆ.ಹರಿಪ್ರಸಾದ್ ಹಾಗೂ ನಾಸೀರ್ ಅಹ್ಮದ್ ಇಬ್ಬರೂ ಒಮ್ಮತದ ಅಭ್ಯರ್ಥಿಗಳು ಎಂದು ಸಿದ್ದರಾಮಯ್ಯ ಹೇಳಿದರು.