ನವದೆಹಲಿ, ಜೂ 19 (Daijiworld News/MSP): ಪೂರ್ವ ಲಡಾಖ್ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತ- ಚೀನಾದ ನಡುವೆ ನಡೆದ ದೈಹಿಕ ಸಂಘರ್ಷದಲ್ಲಿ ಭಾರತದ 20 ಯೋಧರು ಮೃತಪಟ್ಟು, 76 ಸೈನಿಕರು ಗಾಯಗೊಂಡಿದ್ದರು. ಸಂಘರ್ಷದಲ್ಲಿ ಗಾಯಗೊಂಡ ಸೈನಿಕರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಎಂದು ಗುರುವಾರ ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಗಾಯಗೊಂಡ 76 ಸೈನಿಕರಲ್ಲಿ ಲೇಹ್ನ ಸೇನಾ ಆಸ್ಪತ್ರೆಯಲ್ಲಿ 18 ಸೈನಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 58 ಸೈನಿಕರು ಕೂಡಾ ಇನ್ನೊಂದು ವಾರದಲ್ಲಿ ಮರಳಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.
'ಲೇಹ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 18 ಸೈನಿಕರಲ್ಲಿ ಯಾರು ಕೂಡಾ ಗಂಭೀರವಾಗಿಲ್ಲ. ಇವರೆಲ್ಲಾಸುಮಾರು 15 ದಿನಗಳಲ್ಲಿ ಕರ್ತವ್ಯಕ್ಕೆ ಮರಳಲಿದ್ದಾರೆ. ಉಳಿದ 58 ಸೈನಿಕರು ಇತರ ಆಸ್ಪತ್ರೆಗಳಲ್ಲಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಇವರ ಚೇತರಿಕೆಗೆ ಒಂದು ವಾರದ ಬೇಕಾಗಬಹುದು ಎಂದು ಸೇನೆ ತಿಳಿಸಿದೆ.
ಗಾಲ್ವನ್ ಕಣಿವೆಯಲ್ಲಿ ಚೀನಾ- ಭಾರತದ ನಡುವೆ ನಡೆದ ಹಿಂಸಾತ್ಮಕ ಸೈನಿಕ ಸಂಘರ್ಷದಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ ಒಟ್ಟು 20 ಭಾರತೀಯ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು.