ನವದೆಹಲಿ, ಜೂ 19 (Daijiworld News/MSP): ಭಾರತ-ಚೀನಾ ಗಡಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಚೀನಾ ಬಗ್ಗೆ ಏನು ಕ್ರಮ ಕೈಗೊಳ್ಳಬೇಕೆಂದು ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆದಿದ್ದು 15 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಭಾಗಿಯಾಗುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಜೆ 5ಗಂಟೆಗೆ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು, ಸಭೆಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನತೆ ಹಾಗೂ ಇದ್ದಕ್ಕಿದ್ದಂತೆ ಸೃಷ್ಟಿಯಾದ ಸೇನೆಗಳ ಸಂಘರ್ಷದ ಬಗ್ಗೆ ಚರ್ಚಿಸಲಾಗುತ್ತದೆ.ಈಗಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರಪತಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಕರೆ ಮಾಡಿ ಸಭೆಯ ಉದ್ದೇಶದ ಬಗ್ಗೆ ತಿಳಿಸಿದ್ದಾರೆ.
ಈ ಸಭೆಯಲ್ಲಿ ಭಾರತದೊಂದಿಗೆ ಕಲಹಕ್ಕೆ ಮುಂದಾಗಿರುವ ಚೀನಾ ಬಗ್ಗೆ ಯಾವ ನಿಲುವು ಹೊಂದಬೇಕು ಎಂಬ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ.
ಇಂದಿನ ಸಭೆಯಲ್ಲಿ ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ, ಡಿಎಂಕೆ ಯಿಂದ ಸ್ಟ್ಯಾಲಿನ್, ಟಿಡಿಪಿ ಯಿಂದ ಚಂದ್ರಬಾಬು ನಾಯ್ಡು, ಆಂದ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಸಿಪಿಎಂ- ಸೀತಾರಾಮ್ ಯೆಚೂರಿ, ಸಿಪಿಐ- ಡಿ. ರಾಜ, ಅಕಾಲಿ ದಳ – ಸುಖ್ವೀರ್ ಸಿಂಗ್ ಬಾದಲ್, ಶಿವಸೇನೆ – ಉದ್ಧವ್ ಠಾಕ್ರೆ ಎಲ್ಜೆಪಿ- ಚಿರಾಗ್ ಪಾಸ್ವಾನ್, ತೃಣಮೂಲ ಕಾಂಗ್ರೆಸ್- ಮಮತಾ ಬ್ಯಾನರ್ಜಿ,ಎನ್ಸಿಪಿ- ಶರದ್ ಪವಾರ್, ಜೆಡಿಯು- ನಿತೀಶ್ ಕುಮಾರ್, ಸಮಾಜವಾದಿ ಪಕ್ಷ- ರಾಮ್ ಗೋಪಾಲ್ ಯಾದವ್, ಬಿಜೆಪಿ- ಜೆಪಿ ನಡ್ಡಾ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಎಸ್ ಪಿ ಯಿಂದ ಅಖಿಲೇಶ್ ಯಾದವ್, ಜಾರ್ಖಂಡ್ ನಿಂದ ಹೇಮಂತ್ ಸೋರೆನ್, ಬಿಜೆಡಿಯಿಂದ ಪಿನಾಕಿ ಮಿಶ್ರಾ ಭಾಗವಹಿಸಲಿದ್ದಾರೆ.