ನವದೆಹಲಿ, ಜೂ 19 (DaijiworldNews/PY) : ಗಾಲ್ವಾನ್ ಕಣಿವೆಯ ಉಪಗ್ರಹ ಚಿತ್ರಗಳು ದೊರೆತಿದ್ದು, ಚೀನಾ ಕಣಿವೆಗೆ ಯಂತ್ರೋಪಕರಣ ಸಾಗಿಸಿ ಹಿಮಾಲಯ ಪರ್ವತಶ್ರೇಣಿಗಳನ್ನು ಕಡಿದಿರುವುದು ಅಲ್ಲದೇ, ಗಾಲ್ವಾನ್ ನದಿ ಪಾತ್ರದಲ್ಲಿ ವ್ಯತ್ಯಾಸ ಮಾಡುವ ಮೂಲಕ ನದಿಯ ಹರಿವನ್ನು ತಡೆಯಲು ಪ್ರಯತ್ನಿಸಿರುವುದು ಚಿತ್ರಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದ್ದು, ಘರ್ಷಣೆ ನಡೆಯುವ ಒಂದು ವಾರಕ್ಕೆ ಮೊದಲೇ ಚೀನಾ ಗಾಲ್ವಾನ್ ಕಣಿವೆಯಲ್ಲಿ ಈ ಕಾರ್ಯದಲ್ಲಿ ತೊಡಗಿತ್ತು ಎಂದು ತಿಳಿಸಿದೆ.
ಈ ಉಪಗ್ರಹ ಚಿತ್ರಗಳನ್ನು ಅರ್ಥ್ ಇಮ್ಯಾಜಿನ್ ಕಂಪೆನಿ ಪ್ಲಾನೆಟ್ ಲ್ಯಾಬ್ಸ್ ಎನ್ನುವ ಸಂಸ್ಥೆ ಸೆರೆಹಿಡಿದಿದೆ. ಈ ಉಪಗ್ರಹ ಚಿತ್ರದಲ್ಲಿ ಚೀನಾ ಪಡೆಯು ಭೂಪ್ರದೇಶವನ್ನು ಅಗೆದು, ಕಡಿದು, ವಿಸ್ತರಣೆ ಮಾಡಿರುವುದು, ಅಲ್ಲದೇ, ನೀರಿನ ಹರಿವನ್ನು ನಿಯಂತ್ರಿಸಲು ಗಾಲ್ವಾನ್ ನದಿಗೆ ಬುಲ್ಡೋಜರ್ಗಳ ಮೂಲಕ ಅಣೆಕಟ್ಟೆಯಂತ ರಚನೆ ಮಾಡಿರುವುದು ಗೊತ್ತಾಗಿದೆ. ಕಣಿವೆಯಲ್ಲಿ ಹಾಗೂ ನದಿಪಾತ್ರದಲ್ಲಿ ಚೀನಾದ ಯಂತ್ರೋಪಕರಣಗಳು, ವಾಹನಗಳನ್ನು ನಿಯೋಜನೆ ಮಾಡಿರುವುದು ಈ ಚಿತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಉಪಗ್ರಹ ಚಿತ್ರದ ಬಗ್ಗೆ ಹೇಳಿರುವ ಕ್ಯಾಲಿಫೋರ್ನಿಯಾದ ಮಿಡಲ್ಬರಿ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್ನ ಪೂರ್ವ ಏಷ್ಯಾ ನಾನ್ಪ್ರೊಲಿಫರೇಷನ್ ಕಾರ್ಯಕ್ರಮದ ನಿರ್ದೇಶಕ ಜೆಫ್ರಿ ಲೂಯಿಸ್ ಅವರು, ಭೂ ದೃಶ್ಯಗಳನ್ನು ಸ್ಪಷ್ಟವಾಗಿ ಗಮನಿಸಿದರೆ, ಚೀನಾವು ಕಣಿವೆಯಲ್ಲಿ ರಸ್ತೆಗಳನ್ನು ನಿರ್ಮಿಸುತ್ತಿರುವುದು ಹಾಗೂ ಅಣೆಕಟ್ಟೆಯಂತಹ ಮಾದರಿಗಳನ್ನು ನದಿಗೆ ರಚನೆ ಮಾಡಿ ನೀರಿನ ಹರಿವನ್ನು ನಿಯಂತ್ರಿಸುವುದು ತಿಳಿಯುತ್ತದೆ. ಅಲ್ಲದೇ ವಾಸ್ತವ ಗಡಿ ರೇಖೆಯ ಎರಡೂ ಕಡೆಗಳಲ್ಲೂ ವಾಹನಗಳ ಜಮಾವಣೆಯನ್ನು ಕಾಣಿಸುತ್ತಿದ್ದು, ಭಾರತದ ಕಡೆ 30-40 ವಾಹನಗಳನ್ನು ಗುರುತಿಸಬಹುದಾಗಿದೆ. ಆದರೆ, ಚೀನಾ ಕಡೆಯಲ್ಲಿ ನೂರಕ್ಕಿಂತ ಅಧಿಕ ವಾಹನಗಳು ಕಾಣಿಸುತ್ತಿವೆ ಎಂದು ತಿಳಿಸಿದ್ದಾರೆ.
ಸೋಮವಾರ ಭಾರತ ಹಾಗೂ ಚೀನಾದ ನಡುವೆ ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ಭಾರತದ ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದಾರೆ. ಆದರೆ, ಗಡಿಯಲ್ಲಿ ಏನಾಗುತ್ತಿದೆ ಎನ್ನುವ ಮಾಹಿತಿ ನಮಗೆ ಇಲ್ಲ ಎಂದು ವಿದೇಶಾಂಗ ಇಲಾಖೆ ವಕ್ತಾರ ಜಾಹೋ ಲೀಜನ್ ಹೇಳಿದ್ದಾರೆ. ಆದರೆ, ಈ ಘರ್ಷಣೆ ನಡೆಯುವ ಒಂದು ವಾರಕ್ಕೆ ಮೊದಲು ಕಣಿವೆಯಲ್ಲಿ ಚೀನಾ ಪಡೆಯ ಚಲನವಲಗಳು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿವೆ.