ರಾಮನಗರ, ಜೂ 19 (DaijiworldNews/PY) : ಪ್ರಧಾನಿ ಮೋದಿ ಅವರಿಗೆ ತಾಕತ್ತಿದ್ದರೆ ಚೀನಾ ಉತ್ಪನ್ನಗಳ ಆಮದನ್ನು ನಿಲ್ಲಿಸಲಿ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದ್ದಾರೆ.
ಶುಕ್ರವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಅವರಿಗೆ ಚೀನಾ ಉತ್ಪನ್ನಗಳನ್ನು ನಿಷೇಧಿಸುವ ಅಧಿಕಾರವಿದೆ. ಅವರು ಈ ಕ್ರಮಕ್ಕೆ ಮುಂದಾದರೆ ಕಾಂಗ್ರೆಸ್ ಸಹಕಾರ ನೀಡಲಿದೆ ಎಂದು ಹೇಳಿದ್ದಾರೆ.
ಈಗ ಪ್ರಧಾನಿ ಅವರಿಗೆ ಬುದ್ದಿ ಬಂದಿದ್ದು, ಹಳೆಯ ಸ್ನೇಹಿತ ರಷ್ಯಾದೊಂದಿಗೆ ಮಾತುಕತೆಗೆ ಇಳಿದಿದೆ. ಮೊದಲೇ ಈ ಕೆಲಸವನ್ನು ಮಾಡಬೇಕಿತ್ತು. ಚೀನಾದ ಮೇಲೆ ಬಿಜೆಪಿ ಕಾರ್ಯಕರ್ತರು ಯುದ್ದ ಮಾಡಬೇಕು. ಇಲ್ಲದಿದ್ದರೆ ಚೀನಾ ವಸ್ತುಗಳ ಖರೀದಿಯನ್ನು ನಿಲ್ಲಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಆ ಅಧಿಕಾರ ಸರ್ಕಾರದ ಬಳಿ ಇದ್ದು, ನಿರ್ಧಾರವನ್ನು ಸರ್ಕಾರವೇ ಕೈಗೊಳ್ಳಲಿ ಎಂದಿದ್ದಾರೆ.
ಭಾರತೀಯರ ಬಗ್ಗೆ ನಿಜವಾದ ಕಾಳಜಿ ಇದ್ದರೆ ವಿದೇಶಿ ಉತ್ಪನ್ನಗಳ ಆಮದನ್ನು ನಿಲ್ಲಿಸಿ, ಇಲ್ಲಿಯೇ ಉತ್ಪಾದನೆ, ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡಬೇಕು. ಮೇಕ್ ಇನ್ ಇಂಡಿಯಾ, ಸ್ವದೇಶಿ ಚಳವಳಿ ಹೆಸರಿನಲ್ಲಿ ದೇಶದಲ್ಲಿ ಕೇವಲ ಪ್ರಚಾರ ಪಡೆಯಲಾಗುತ್ತಿದೆ ಎಂದಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ವೈದ್ಯರಿಗೂ ಸೋಂಕು ತಗುಲಿರುವುದು ದುರದೃಷ್ಟಕರವಾಗಿದೆ. ಸ್ವಯಂಪ್ರೇರಿತವಾಗಿ ಸಾರ್ವಜನಿಕರೇ ಸೀಲ್ಡೌನ್ ಮಾಡಿದ್ದಾರೆ. ಅಗತ್ಯವಾದಂತ ಸಲಹೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಭಾನುವಾರ ನಾನು ಈ ವಿಚಾರವಾಗಿ ಸಭೆ ನಡೆಸಲಿದ್ದೇನೆ ಎಂದು ತಿಳಿಸಿದ್ದಾರೆ.