ನವದೆಹಲಿ, ಜೂ 19 (DaijiworldNews/PY) : ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕರ್ನಾಟಕ ಮಾದರಿಯನ್ನು ಅನುಸರಿಸುವಂತೆ ರಾಜ್ಯಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ಸೋಂಕಿತರ ಸಂಪರ್ಕ ಉಳ್ಳವರರನ್ನು ಕರ್ನಾಟಕದಲ್ಲಿ ಶೀಘ್ರವೇ ಪತ್ತೆ ಮಾಡುತ್ತಿರುವುದಕ್ಕೆ ಹಾಗೂ ಮನೆ-ಮನೆ ಆರೋಗ್ಯ ಸಮೀಕ್ಷೆ ಮಾಡುತ್ತಿರುವುದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಕೊರೊನಾ ವ್ಯಾಪಿಸುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ 1.5 ಕೋಟಿಗೂ ಅಧಿಕ ಮಂದಿಯನ್ನು ಸಮೀಕ್ಷೆ ಮಾಡಲಾಗಿದೆ ಎನ್ನಲಾಗಿದೆ.
ಸ್ಥಳೀಯ ಆದ್ಯತೆಗಳಿಗೆ ತಕ್ಕಂತೆ ಈ ಉತ್ತಮ ಕ್ರಮಗಳನ್ನು ಅಳವಡಿಸಿವಂತೆ ಹಾಗೂ ಕೊರೊನಾ ಸಾಂಕ್ರಾಮಿಕದ ವಿರುದ್ದದ ಹೋರಾಟದಲ್ಲಿ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರವು ಇತರೆ ರಾಜ್ಯಗಳಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೋಂಕಿತರ ಸಂಪರ್ಕವಿದ್ದವರನ್ನು ಶೀಘ್ರವೇ ಪತ್ತೆ ಮಾಡುವ ಕಾರ್ಯದಿಂದ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತಿದೆ ಎಂದು ಕೇಂದ್ರ ಹೇಳಿದ್ದು, ಕೊರೊನಾ ನಿಯಂತ್ರಿಸುವಲ್ಲಿ ಮೊಬೈಲ್ ಆ್ಯಪ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿರುವುದಕ್ಕೂ ಕೇಂದ್ರ ಕರ್ನಾಟಕವನ್ನು ಶ್ಲಾಘಿಸಿದೆ.