ಕೋಟಾ, ಜೂ 20 (Daijiworld News/MSP): ಸೆಕೆ ತಡೆದುಕೊಳ್ಳಲಾಗುತ್ತಿಲ್ಲ ಎಂದು ರೋಗಿಯ ಸಂಬಂಧಿಕರು ಮಾಡಿದ ಎಡವಟ್ಟಿಗೆ ಆಸ್ಪತ್ರೆಯಲ್ಲಿದ್ದ ರೋಗಿ ಒದ್ದಾಡಿ ಪ್ರಾಣ ಬಿಟ್ಟ ಘಟನೆ ರಾಜಸ್ಥಾನದ ಕೋಟಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ಶಂಕಿಸಿ 40 ವರ್ಷ ರೋಗಿಯೊಬ್ಬನ್ನುಕೋಟಾದ ಮಹಾರಾವ್ ಭೀಮಾ ಸಿಂಗ್(ಎಂಬಿಎಸ್) ಎಂಬ ಸರ್ಕಾರಿ ಆಸ್ಪತ್ರೆಗೆ ಜೂನ್ 13ರಂದು ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಐಸಿಯುನಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಬಳಿಕ ಕೊರೊನಾ ತಪಾಸಣೆಯ ವರದಿ ನೆಗೆಟಿವ್ ಬಂದಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೂನ್ 15ರಂದು ಈ ವ್ಯಕ್ತಿಯನ್ನು ಐಸೊಲೇಶನ್ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು.
ಆಸ್ಪತ್ರೆಯ ವಾರ್ಡ್ನಲ್ಲಿ ಒಂದೇ ಸಾಕೆಟ್ ಇರುವ ಕಾರಣ ಅದಕ್ಕೆ ವೆಂಟಿಲೇಟರ್ನ ಪ್ಲಗ್ ಸಿಕ್ಕಿಸಲಾಗಿತ್ತು. ಐಸೋಲೇಷನ್ ವಾರ್ಡ್ನಲ್ಲಿ ಸೆಕೆ ಜಾಸ್ತಿ ಇದ್ದಿದ್ದರಿಂದ ರೋಗಿಯ ಕುಟುಂಬಸ್ಥರು ಕೂಲರ್ ತಂದಿದ್ದಾರೆ. ಆದರೆ ಏರ್ ಕೂಲರ್ ಚಾಲನೆ ಮಾಡಲು ಪ್ಲಗ್ ಇಲ್ಲದ ರೋಗಿಗೆ ಅಳವಡಿಸಿದ್ದ ವೆಂಟಿಲೇಟರ್ನ ಪ್ಲಗ್ ಕಿತ್ತು, ಕೂಲರ್ ಅಳವಡಿಸಿದ್ದಾರೆ. ಹೀಗಾಗಿ ಆಕ್ಸಿಜನ್ ಕೊರತೆಯಿಂದ ಅರ್ಧಗಂಟೆ ಬಳಿಕ ವೆಂಟಿಲೇಟರ್ಗೆ ವಿದ್ಯುತ್ ಇಲ್ಲದೇ ರೋಗಿ ಮೃತಪಟ್ಟಿದ್ದಾರೆ.
ಬಳಿಕ ಕುಟುಂಬಸ್ಥರು ರೋಗಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪ ಮಾಡಿದ್ದಾರೆ. ಹೀಗಾಗಿ ಆಸ್ಪತ್ರೆ ಆಡಳಿತ 3 ಜನರ ಸಮಿತಿ ರಚಿಸಿ ತನಿಖೆ ನಡೆಸುವಂತೆ ತಿಳಿಸಿದೆ. ಬಳಿಕ ತನಿಖೆ ವೇಳೆ ವೆಂಟಿಲೇಟರ್ ಸ್ವಿಚ್ ಆಫ್ ಮಾಡಿದ್ದರಿಂದಲೇ ರೋಗಿ ಸಾವನ್ನಪ್ಪಿದ್ದಾರೆ ಅನ್ನುವುದು ಬೆಳಕಿಗೆ ಬಂದಿದೆ.