ಹೈದರಬಾದ್, ಜೂ 20 (Daijiworld News/MSP): ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಮಡಿದ ಧೈರ್ಯಶಾಲಿಗಳ ತ್ಯಾಗವನ್ನು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ. ಈ ಬಗ್ಗೆ ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ ಎಂದು ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್.ಎಸ್ ಭದೌರಿಯಾ ಹೇಳಿದ್ದಾರೆ.
ಶನಿವಾರ ಹೈದರಾಬಾದ್ ನಲ್ಲಿ ನಡೆದ ಗ್ರಾಜುವೇಷನ್ ಪರೇಡ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚೀನಾದೊಂದಿಗಿನ ಪ್ರಸ್ತುತ ಗಡಿ ಪರಿಸ್ಥಿತಿಯ ವಿಚಾರವಾಗಿ "ನಮ್ಮ ಸೇನೆಯೂ ಯಾವುದೇ ಆಕಸ್ಮಿಕ ಬೆಳವಣಿಗೆಗಳಿಗೂ ಸ್ಪಂದಿಸುವ ಬಲವನ್ನು ಹೊಂದಿದೆ. ಎಲ್ಎಸಿ ಅಥವಾ ಅದರಾಚೆ ಇರಲಿಪರಿಸ್ಥಿತಿಯ ಬಗ್ಗೆ ನಮಗೆ ಚೆನ್ನಾಗಿ ಅರಿವಿದೆ. ಅವರ ವಾಯು ನಿಯೋಜನೆ, ಅವರ ಯೋಜನೆ, ಅದಕ್ಕೆ ತಕ್ಕ ನಿಯೋಜನೆಗಳಾಗಿರಬಹುದು. ಈ ಬಗ್ಗೆ ಸಂಪೂರ್ಣ ವಿಶ್ಲೇಷಣೆ ಹೊಂದಿದ್ದೇವೆ ಮತ್ತು ಮುಂದೊದಗಬಹುದ ಯಾವುದೇ ಆಕಸ್ಮಿಕ ಬೆಳವಣಿಗೆಯನ್ನು ನಿಭಾಯಿಸಲು ಸಿದ್ದವಾಗಿದು ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಂಡಿದ್ದೇವೆ. ನಾವು ಎಲ್ಲವನ್ನು ಮೇಲ್ವಿಚಾರಣೆ ಮಾಡುತ್ತಿದ್ದು ಪ್ರತಿ ಕ್ಷಣದ ಪೂರ್ಣ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿದೆ "ಎಂದು ಅವರು ಹೇಳಿದರು
"ಪ್ರಸ್ತುತ ಇರುವ ಪರಿಸ್ಥಿತಿ ಭಾರತಕ್ಕೆ ಮತ್ತು ಯೋಧರಿಗೆ ಬಹುದೊಡ್ಡ ಸವಾಲಾಗಿದೆ. ಆದರೆ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸುತ್ತೇವೆ, ಭಾರತದ ಸಾರ್ವಭೌಮತ್ವವನ್ನು ಕಾಪಾಡುತ್ತೇವೆ" ಎಂದರು.
ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಜೂನ್ 15 ರಂದು ಭಾರತ-ಚೀನಾ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಚೀನಾದ 40 ಮಂದಿ ಸೈನಿಕರು ಮೃತಪಟ್ಟಿದ್ದರು.