ನವದೆಹಲಿ, ಜೂ.20 (DaijiworldNews/MB) : ಭಾರತ-ಚೀನಾ ಗಡಿ ಸಂಘರ್ಷದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರರನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಡಿಮಿಡಿಗೊಂಡಿದ್ದು ಕ್ಷುಲ್ಲಕ ರಾಜಕೀಯ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಗೆ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಎಎನ್ಐ ಟ್ವೀಟ್ನ್ನು ರೀಟ್ವೀಟ್ ಮಾಡಿರುವ ಅವರು, ಧೈರ್ಯಶಾಲಿ ಸೈನಿಕರ ತಂದೆ ಮಾತನಾಡಿದ್ದಾರೆ. ಅವರು ರಾಹುಲ್ ಗಾಂಧಿಯವರಿಗೆ ಸ್ಪಷ್ಟವಾದ ಸಂದೇಶವನ್ನು ನೀಡಿದ್ದಾರೆ. ರಾಷ್ಟ್ರವೇ ಒಗ್ಗೂಡಿರುವ ಈಸಮಯದಲ್ಲಿ ರಾಹುಲ್ ಗಾಂಧಿ ಕ್ಷುಲ್ಲಕ ರಾಜಕೀಯ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಗೆ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.
ಅಮಿತ್ ಶಾ ಅವರು ರೀಟ್ವೀಟ್ ಮಾಡಿರುವ ವರದಿಯ ವಿಡಿಯೋವೊಂದರಲ್ಲಿ ಚೀನಾದೊಂದಿಗೆ ಘರ್ಷನೆಯಲ್ಲಿ ಗಾಯಗೊಂಡ ಯೋಧರೊಬ್ಬರ ತಂದೆಯು, ಚೀನಾವನ್ನು ಸೋಲಿಸುವಷ್ಟು ಭಾರತ ಬಲಿಷ್ಟವಾಗಿದ್ದು ಈ ವಿಚಾರದಲ್ಲಿ ರಾಹುಲ್ ಗಾಂಧಿಯವರು ರಾಜಕೀಯ ಮಾಡುವುದನ್ನು ಬಿಡಬೇಕು. ನನ್ನ ಪುತ್ರ ಸೇನೆಯಲ್ಲಿ ಹೋರಾಡಿದ್ದು ಮುಂದೆಯೂ ಹೋರಾಡುತ್ತಾನೆ ಎಂದು ಹೇಳಿದ್ದರು.
ಭಾರತದ ಭೂ ಪ್ರದೇಶವನ್ನು ಯಾರೂ ಕೂಡಾ ಆಕ್ರಮಿಸಿಲ್ಲ. ಯಾವುದೇ ಮಿಲಿಟರಿ ಅಧಿಕಾರಿಗಳನ್ನು ಬಂಧಿಸಿಲ್ಲ ಎಂದು ಪ್ರಧಾನಿ ಮೋದಿಯವರು ಸರ್ವಪಕ್ಷ ಸಭೆಯಲ್ಲಿ ಹೇಳಿದ ಬಳಿಕ ಟ್ವೀಟ್ ಮಾಡಿದ ರಾಹುಲ್ ಗಾಂಧಿಯವರು, ಪ್ರಧಾನಿ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿದ್ದಾರೆ. ಭೂಮಿ ಚೀನಾದ್ದಾಗಿದ್ದರೆ, ನಮ್ಮ ಸೈನಿಕರನ್ನು ಯಾಕೆ ಕೊಲ್ಲಲಾಯಿತು? ಅವರು ಎಲ್ಲಿ ಕೊಲ್ಲಲ್ಪಟ್ಟರು? ಎಂದು ಪ್ರಶ್ನಿಸಿದ್ದಾರೆ.