ಅಸ್ಸಾಂ, ಜೂ 20 (DaijiworldNews/PY) : ಕಳ್ಳನೋರ್ವ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇದ್ದ ಕೊರೊನಾ ಸೋಂಕಿತನ ಮೊಬೈಲ್ ಕದ್ದು ಕ್ವಾರಂಟೈನ್ ಆಗಿರುವ ಘಟನೆ ಅಸ್ಸಾಂನ ಚಿರಾಂಗ್ ಜಿಲ್ಲೆಯ ಕಾಜಲ್ಗಾಂವ್ನ ಜೆಎಸ್ಎಸ್ಬಿ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.
ಮೊಬೈಲ್ ಕದ್ದ ಕಳ್ಳನನ್ನು ಪಪ್ಪು ಬರ್ಮನ್ (22) ಎಂದು ಗುರುತಿಸಲಾಗಿದೆ.
ಪಪ್ಪು ಬರ್ಮನ್ ರಾತ್ರಿ ಸುಮಾರು ಒಂದು ಗಂಟೆಗೆ ಆಸ್ಪತ್ರೆಯಲ್ಲಿ ಸೋಂಕಿತ ಮಲಗಿದ ಬಳಿಕ ಐಸೋಲೇಷನ್ ವಾರ್ಡ್ಗೆ ನುಗ್ಗಿ ಫೋನ್ ಕದ್ದು ಸಿಕ್ಕಿಬಿದ್ದಿದ್ದು, ಆತನನ್ನು ಅದೇ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಫೋನ್ ಕದ್ದ ಬಳಿಕ ಆತ ಆಸ್ಪತ್ರೆಯಿಂದ 15ಕಿ.ಮೀ ದೂರದಲ್ಲಿರುವ ತನ್ನ ಮನೆಗೆ ವಾಪಾಸ್ಸಾಗಿದ್ದ. ಆದರೆ, ಪೊಲೀಸರು ಸಿಸಿಟಿವಿ ದೃಶ್ಯವನ್ನು ಆಧರಿಸಿ ಆತನನ್ನು ಪತ್ತೆ ಮಾಡಿದ್ದಾರೆ. ಬಳಿಕ ವೈದ್ಯರೊಂದಿಗೆ ಆತನ ಮನೆಗೆ ಹೋಗಿ ಬಂಧಿಸಿ ಬಳಿಕ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆತನ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ನಿರೀಕ್ಷಿಸುತ್ತಿದ್ದಾರೆ.
ಪಪ್ಪು ಬರ್ಮನ್ ಹೇಗೆ ಧೈರ್ಯ ಮಾಡಿ ಐಸೋಲೇಷನ್ ವಾರ್ಡ್ ಒಳಗೆ ಹೋಗಿದ್ದಾನೆ ಎಂದು ಈಗಲೂ ನಮಗೆ ತಿಳಿಯುತ್ತಿಲ್ಲ. ಈತ ಕೊರೊನಾ ಸೋಂಕಿತನ ಮೊಬೈಲ್ ಕದ್ದಿದ್ದಾನೆ. ಸೋಂಕಿತ ಇನ್ನೂ ಸಕ್ರಿಯ ಹಂತದಲ್ಲಿದ್ದು, ಮೊಬೈಲ್ಗೂ ವೈರಸ್ ಅಂಟಿರಬಹುದು. ಆದ ಕಾರಣ ವರದಿ ಬರುವವರೆಗೂ ಪಪ್ಪು ಬರ್ಮನ್ ಮೇಲೆ ನಿಗಾವಹಿಸಿದ್ದೇವೆ ಎಂದು ವೈದ್ಯ ಮನೋಜ್ ದಾಸ್ ತಿಳಿಸಿದ್ದಾರೆ.
ಮೊಬೈಲ್ ಕದ್ದ ಆರೋಪಿಯನ್ನು ಕ್ವಾರಂಟೈನ್ಗೆ ಒಪ್ಪಿಸಿದ್ದು, ಅಲ್ಲದೇ, ಈ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದೇವೆ. ಇನ್ನು ಆತನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಬೇಕಾಗಿದೆ ಎಂದು ಎಸ್ಪಿ ಸುಧಾಕರ್ ಸಿಂಗ್ ಹೇಳಿದ್ದಾರೆ.