ನವದೆಹಲಿ, ಜೂ.20 (DaijiworldNews/MB) : ಪ್ರಧಾನಿ ಮೋದಿ ಚೀನಾದ ಯೋಧರು ಗಡಿ ಪ್ರವೇಶಿಸಿಲ್ಲ ಎಂದು ಹೇಳಿರುವ ಹಿನ್ನಲೆಯಲ್ಲಿ ಪ್ರಧಾನಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಶನಿವಾರ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮೂಲಕ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿರುವ ಅವರು, ಪ್ರಧಾನಿ ಭಾರತೀಯ ಭೂಪ್ರದೇಶದಲ್ಲಿ ವಿದೇಶಿಯರು ಇಲ್ಲ (ಅಂದರೆ ಚೀನಿಯರು) ಎಂದು ಹೇಳಿದ್ದಾರೆ. ಇದು ನಿಜವಾಗಿದ್ದರೆ, ಮೇ 5-6ರ ಗಡಿಯಲ್ಲಿ ಏನು ನಡೆಯಿತು? ಜೂನ್ 16-17 ರಂದು ಸೈನಿಕರ ನಡುವೆ ಯಾಕೆ ಘರ್ಷಣೆಯಾಯಿತು? ಭಾರತ 20 ಯೋಧರು ಯಾಕೆ ಪ್ರಾಣ ಕಳೆದುಕೊಂಡರು?
ಚೀನಾದ ಸೈನ್ಯ ಯಾವುದೇ ಒಳನುಸುಳುವಿಕೆ ಮಾಡದಿದ್ದರೆ, ಕಾರ್ಪ್ಸ್ ಕಮಾಂಡರ್ಗಳು ಜೂನ್ 6 ರಂದು ಏನು ಮಾತನಾಡಿದರು? ಯಾವ ಹವಾಮಾನದ ಬಗ್ಗೆ ಚರ್ಚೆ ನಡೆಸಿದ್ದಾರೆ.?
ಯಾವುದೇ ಚೀನೀ ಪಡೆಗಳು ಎಲ್ಎಸಿ ದಾಟಿ ಭಾರತೀಯ ಭೂಪ್ರದೇಶಕ್ಕೆ ಬಂದಿಲ್ಲದಿದ್ದರೆ, ವಿದೇಶಾಂಗ ಸಚಿವ ಜೈಶಂಕರ್ ಅವರು “ಯಥಾಸ್ಥಿತಿ ಪುನಃಸ್ಥಾಪನೆ” ಹೇಳಿಕೆ ನೀಡಿದ್ದೇಕೆ?
ಚೀನಾವು ಭಾರತದ ಗಡಿ ದಾಟಿ ಒಳ ಬಂದಿಲ್ಲದಿದ್ದರೆ ಅಥವಾ ಗಡಿ ಒಪ್ಪಂದ ಉಲ್ಲಂಘನ ಮಾಡಿಲ್ಲದಿದ್ದರೆ ಎರಡೂ ದೇಶಗಳ ಸೈನ್ಯಗಳನ್ನು ನಿಷ್ಕ್ರಿಯಗೊಳಿಸುವುದರ ಬಗ್ಗೆ ಇಷ್ಟೊಂದು ಚರ್ಚೆ ನಡೆಸಿದ್ದೇಕೆ?
ಪ್ರಧಾನಿ ಮೋದಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ? ಹಾಗಿದ್ದರೆ, ಚೀನಾದೊಂದಿಗೆ ಮಾತುಕತೆ ನಡೆಸಲು ಏನು ಇದೆ? ಮೇಜರ್ ಜನರಲ್ಗಳು ಯಾಕೆ ಮಾತುಕತೆ ನಡೆಸುತ್ತಿದ್ದಾರೆ ಮತ್ತು ಯಾವುದರ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.