ಭೂಪಾಲ್, ಜೂ 20 (DaijiworldNews/PY) : ಎದುರಾಳಿ ಪಡೆಗೆ ತಕ್ಕನಾದ ಉತ್ತರವನ್ನು ನಮ್ಮ ಸೈನ್ಯವು ನೀಡುತ್ತದೆ. ಆದರೆ, ಚೀನಾಗೆ ನಾವು ಆರ್ಥಿಕವಾಗಿ ಹೊಡೆತ ಕೊಡಲಿದ್ದೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ದಿನದಿಂದ ದಿನಕ್ಕೆ ಭಾರತದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧ ಮಾಡುವಂತ ಬೇಡಿಕೆ ಹೆಚ್ಚಾಗಿ ಕೇಳಿಬರುತ್ತಿದ್ದು, ಚೀನಾ ತಯಾರು ಮಾಡಿರುವ ಉತ್ಪನ್ನಗಳನ್ನು ಮಧ್ಯಪ್ರದೇಶದಲ್ಲಿ ಬಹಿಷ್ಕಾರ ಮಾಡುವಂತೆ ಚೌಹಾಣ್ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಚೀನಾದ ಉತ್ಪನ್ನಗಳನ್ನು ನಿಷೇಧ ಮಾಡುವಂತ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಈ ನಡುವೆ ಶುಕ್ರವಾರ ವ್ಯಾಪಾರಿಗಳು, ಚೀನಾದಿಂದ ವಾರ್ಷಿಕವಾಗಿ 5.63 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿರುವ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ಮಾರಾಟವನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿರುವ ರಾಷ್ಟ್ರೀಯ ವ್ಯಾಪಾರ ಸಂಸ್ಥೆ, ಸುಮಾರು 1700 ಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಚೀನಾದಿಂದ ಆಮದು ವಸ್ತುಗಳ ಪೈಕಿ ಚಿಲ್ಲರೆ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ. ಈ ಪೈಕಿ ವ್ಯಾಪಾರಿಗಳು ಹೆಚ್ಚಾಗಿ ಗೃಹಪಯೋಗಿ ವಸ್ತುಗಳು, ಆಟಿಕೆಗಳನ್ನು, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ಹಾಗೂ ಸೌಂದರ್ಯವರ್ಧಕಗಳನ್ನು ಕೂಡಾ ಮಾರಾಟ ಮಾಡುತ್ತಿದ್ದಾರೆ. ಭಾರತೀಯ ಉತ್ಪನ್ನಗಳನ್ನು ಇವುಗಳಿಗೆ ಪರ್ಯಾಯವಾಗಿ ಬಳಕೆ ಮಾಡಬಹುದು ಎಂದು ತಿಳಿಸಿದೆ.