ಕೋಲ್ಕತ್ತಾ, ಜೂ.20 (DaijiworldNews/MB) : ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಇಲ್ಲದೆ ಆನ್ಲೈನ್ ತರಗತಿ ಹಾಜರಾಗಲು ಆಗಿಲ್ಲ ಎಂಬ ಕಾರಣದಿಂದಾಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಪಶ್ಚಿಮ ಬಂಗಾಳದ ಹೌರ ಜಿಲ್ಲೆಯ ನಿಸ್ಚಿಂಡಾದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಶಬಿನಿ ಕುಮಾರಿ ಸೌ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ವಿದ್ಯಾರ್ಥಿನಿಯ ತಂದೆ ಸಂತೂ, ಲಾಕ್ಡೌನ್ ಸಂದರ್ಭದಲ್ಲಿ ನಾನು, ನನ್ನ ಪತ್ನಿ ಮತ್ತು ಹಿರಿಯ ಮಗ ಊರಿಗೆ ಹೋಗಿದ್ದು ಶಬಿನಿ ಮತ್ತು ಆಕೆಯ ಮತ್ತೋರ್ವ ಅಣ್ಣ ಮನೆಯಲ್ಲೇ ಇದ್ದರು. ಅವರ ಬಳಿ ಮೊಬೈಲ್ ಇತ್ತು, ಆದರೆ ಅದು ಬಿದ್ದು ಕೆಟ್ಟುಹೋಯಿತು. ಲಾಕ್ಡೌನ್ ಕಾರಣದಿಂದಾಗಿ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಈ ನಡುವೆ ಆನ್ಲೈನ್ ತರಗತಿ ಹಾಜರಾಗದೆ ನಾನು ಫೇಲ್ ಆಗುತ್ತೇನೆ ಎಂದು ಆಕೆ ಭಯಪಟ್ಟಿದ್ದಳು. ಹೊಸ ಮೊಬೈಲ್ ತರುವುದಾಗಿ ನಾನು ಹೇಳಿದ್ದೆ. ಆದರೆ ಗುರುವಾರ ಆಕೆಯ ಅಣ್ಣ ಕ್ರಿಕೆಟ್ ಆಡಲು ಹೋದ ಸಂದರ್ಭದಲ್ಲಿ ಈಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಸಹೋದರ ಮನೆಯಲ್ಲಿ ಇಲ್ಲದ ಸಂದರ್ಭ ಈಕೆ ಶಬಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಿಂದಿರುಗಿ ಬಂದ ಸಹೋದರ ಬಾಗಿಲು ಬಡಿದಾಗ ತೆಗೆಯದ ಕಾರಣ ಆತ ಕಿಟಕಿಯಲ್ಲಿ ನೋಡಿ ಈ ಬಗ್ಗೆ ತಿಳಿಸಿದ್ದಾನೆ. ಸ್ಥಳದಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.