ಬೆಂಗಳೂರು, ಜೂ 20 (Daijiworld News/MSP): ಒಂದು ಕಡೆ ದೇಶದಲ್ಲಿ ಕಾಡುತ್ತಿರುವ ಕೋವಿಡ್ ಮತ್ತೊಂದು ಕಡೆ ಚೀನಾ ನಡೆಸುತ್ತಿರುವ ಕುತಂತ್ರ. ಈ ಹಿಂದೆಯೂ ನೆಹರು ಅವರ ಕಾಲದಲ್ಲಿಯೂ ಚೀನಾದವರು ಭಾರತದ ಮೇಲೆ ದಾಳಿ ಮಾಡಿದ್ದರು. ನಮ್ಮ ಪ್ರಧಾನಿ ಮೋದಿಜಿ ಚೀನಾದವರಿಗೆ ಅಷ್ಟೊಂದು ಬೆಲೆ ಕೊಡಬಾರದಿತ್ತು. ಆದರೆ ನೆರೆಹೊರೆಯವರು ಎಂದು ಮೋದಿ ಅಲ್ಲಿಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬಂದಿದ್ದಾರೆ ಇಷ್ಟಾದರೂ ಚೀನಾ ಹಿಂದಿನಿಂದ ಇರಿಯುವ ಪ್ರವೃತ್ತಿ ಬಿಟ್ಟಿಲ್ಲ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚೀನಾ- ಭಾರತ ಗಡಿ ಬಿಕ್ಕಟ್ಟು ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ಗಡಿಯಲ್ಲಿ ನಾವು ಹೋಗಿಲ್ಲ, ಅವರೂ ಬಂದಿಲ್ಲವೆಂದುಮೋದಿ ಹೇಳುತ್ತಾರೆ. ಆದರೆ ಪ್ರಧಾನಿ ಕೆಲವು ವಿಷಯಗಳನ್ನು ದೇಶದ ಜನರ ಮುಂದಿಡಬೇಕು. ಗಡಿ ವಿಚಾರಗಳನ್ನು ಕೇಂದ್ರ ಸರ್ಕಾರ ಮುಚ್ಚಿಡುವುದು ಸರಿಯಲ್ಲ ಎಂದು ಹೇಳಿದರು.
ಗಡಿ ವಿಚಾರದಲ್ಲಿ ಇಡೀ ದೇಶದ ಜನ ಒಂದಾಗಿದ್ದಾರೆ. ಇವತ್ತು ಭಿನ್ನಾಬಿಪ್ರಾಯ ಹೇಳಿಕೆಗಳು ಸರಿಯಲ್ಲ. ನೆಲ,ಜಲ ಭಾಷೆ,ರಾಷ್ಟ್ರೀಯತೆ ಬಂದಾಗ ಒಟ್ಟಾಗಿ ಎದುರಿಸಬೇಕು.ಇರುವ ವಿಚಾರವನ್ನು ಪ್ರಧಾನಿಯವರು ದೇಶದ ಮುಂದಿಡಬೇಕು , ಇಲ್ಲಿ ಗುಪ್ತಚರ ಲೋಪ ಆಗಿದ್ದರೂ ಹೇಳಬೇಕು , ಸೈನಿಕರಿಗೆ ಶಸ್ತ್ರಾಸ್ತ್ರ ನೀಡಿಲ್ಲವೆಂದರೂ ಹೇಳಬೇಕು , ಜನರಿಗೆ ತಪ್ಪ ಸಂದೇಶ ಹೋಗಬಾರದು , ಈ ವಿಚಾರದಲ್ಲಿ ಪ್ರಧಾನಿ ಏನನ್ನು ಮುಚ್ಚಿಡಬಾರದು ಎಂದರು.