ಕೊಪ್ಪಳ, ಜೂ 20 (Daijiworld News/MSP):'ಇದು ಧಮ್ಮು, ಕೆಮ್ಮು ಪರೀಕ್ಷಿಸುವ ಸಮಯವಲ್ಲ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಸಿರುವ ಪದ ಯಾವ ಭಾಷೆಯದ್ದು?, ಸಭ್ಯವಾಗಿರುವುದೇ? ಮುಖ್ಯಮಂತ್ರಿಗಳು ಧಮ್ ತೋರಿಸುವಂತಹದ್ದು ಏನಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಉಸ್ತುವಾರಿ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.
ಕೊಪ್ಪಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ದೊರಕಬೇಕಾದ ಪಾಲನ್ನು ನೀಡಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೂಡ ಸಿಎಂ ಬಿ.ಎಸ್.ಯಡಿಯೂರಪ್ಪ ತಂದಿದ್ದಾರೆ ಎನ್ನುವುದು ಸಿದ್ದರಮಯ್ಯ ಅವರಿಗೆ ನೆನಪಿರಲಿ ಎಂದು ಸ್ಪಷ್ಟಪಡಿಸಿದರು.
ಇದೆಲ್ಲಾ ಇರಲಿ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದರೂ ಸಹ ಅವರು ದಿನಕ್ಕೆ ಹತ್ತು ಹದಿನೈದು ಸಭೆಗಳನ್ನು ನಡೆಸುತ್ತಾರೆ. ಆ ಶಕ್ತಿ ಅವರಿಗಿದೆ . ನಿರಂತರವಾಗಿ ರಾಜ್ಯದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ಒಂದು ವೇಳೆ ಹೊರ ರಾಷ್ಟ್ರ, ರಾಜ್ಯದಿಂದ ಜನರು ಬಾರದೇ ಹೋಗಿದ್ದಲ್ಲಿ ಕರ್ನಾಟಕದಲ್ಲಿ ಶೂನ್ಯ ಕೊರೊನಾ ಪ್ರಕರಣಗಳಾಗುತ್ತಿದ್ದವು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು, ವಿರೋಧ ಮಾಡುವುದೇ ಅವರ ಕೆಲಸ. ಅವರು ವಿರೋಧಿಸುವುದನ್ನೇ ತಮ್ಮ ಆದ್ಯ ಕರ್ತವ್ಯ ಎಂದುಕೊಂಡಿದ್ದಾರೆ ಎಂದು ಕುಟುಕಿದರು.
ಸಿದ್ದರಾಮಯ್ಯ , ಸಿಎಂ ವಿರುದ್ದ " ಪ್ರಧಾನಿ ಮೋದಿ ತಾಳಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕುಣಿಯುತ್ತಿದ್ದಾರೆ. ಜಿಎಸ್ಟಿ ಹಣ ಸೇರಿದಂತೆ 15ನೇ ಹಣಕಾಸು ಆಯೋಗದಡಿ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾಗಿರುವ ಅನುದಾನವನ್ನು ಕೇಳಿ ಪಡೆಯಲು ಮುಖ್ಯಮಂತ್ರಿ ಯಡಿಯೂರಪ್ಪಗೆ ಧಮ್ ಇಲ್ಲ ಎಂದು ವ್ಯಂಗ್ಯವಾಡಿದ್ದರು.