ನವದೆಹಲಿ, ಜೂ.21 (DaijiworldNews/MB) : ಅಂತಾರಾಷ್ಟ್ರೀಯ ಯೋಗದಿನವು ಏಕತೆಯ ಆಚರಣೆಯ ದಿನ. ಯೋಗ ಮಾಡುವುದಕ್ಕೆ ಯಾವುದೇ ಜನಾಂಗ, ಬಣ್ಣ, ಲಿಂಗ, ನಂಬಿಕೆ ಮತ್ತು ರಾಷ್ಟ್ರಗಳ ತಾರತಮ್ಯವಿಲ್ಲ, ಇವೆಲ್ಲಕ್ಕೂ ಮೀರಿದ ಶಕ್ತಿ ಇರುವುದು ಯೋಗಕ್ಕೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
6ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿದಿನವು ಯೋಗ ಮಾಡುವಂತೆ ಮನವಿ ಮಾಡಿದ್ದು ಯೋಗುವ ಆರೋಗ್ಯಕರವಾದ ವಾತಾವರಣ ಸೃಷ್ಟಿ ಮಾಡುತ್ತದೆ. ನಿತ್ಯವು ಪ್ರಾಣಾಯಾಮ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.
ಕೊರೊನಾ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯನ್ನು ಆಕ್ರಮಿಸುತ್ತದೆ. ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳಿಂದ ಉಸಿರಾಟದ ವ್ಯವಸ್ಥೆ ಬಲಗೊಂಡು ರೋಗ ನಿರೋಧಕ ಶಕ್ತಿಗೆ ವೃದ್ಧಿಗೆ ನೆರವಾಗುತ್ತದೆ ಎಂದು ಹೇಳಿದರು.
ಕೊರೊನಾ ಕಾರಣದಿಂದಾಗಿ ಈ ವರ್ಷದ ಯೋಗ ದಿನದ ಧ್ಯೇಯವಾಕ್ಯ ಮನೆಯಲ್ಲಿಯೇ ಯೋಗ ಎಂಬುದಾಗಿದೆ. ಎಲ್ಲರೂ ಮನೆಯಲ್ಲಿ ಕುಟುಂಬದೊಂದಿಗೆ ಯೋಗ ಮಾಡುವುದನ್ನು ಪ್ರತಿದಿನದ ಒಂದು ಭಾಗವಾಗಿಸಿ ಎಂದು ಕರೆ ನೀಡಿದರು.
2014ರ ಸೆಪ್ಟೆಂಬರ್ 27ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯ ಬಗ್ಗೆ ಪ್ರಸ್ತಾಪ ಮಾಡಿದ್ದು ಅದಕ್ಕೆ ಎಲ್ಲಾ ರಾಷ್ಟ್ರಗಳು ಸಮ್ಮತಿಸಿದ ಹಿನ್ನಲೆ 2015ರಿಂದ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಆಚರಿಸಲಾಗುತ್ತಿದೆ.