ಬೆಂಗಳೂರು, ಜೂ.21 (DaijiworldNews/MB) : ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆಗೆ ನಗರದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಸೀಲ್ ಅಳಿಸಿ ಹಾಜರಾಗಿದ್ದಾಳೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಈಗಾಗಲೇ ವಿದ್ಯಾರ್ಥಿನಿಯ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ಪರೀಕ್ಷೆಗೆ ಹಾಜರಾಗಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶನಿವಾರ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸುದ್ದಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ ವಿದ್ಯಾರ್ಥಿನಿ ಪರೀಕ್ಷೆ ಬರೆದ ಕೊಠಡಿಯಲ್ಲಿ ಪರೀಕ್ಷೆ ಬರೆದ ಇತರ ವಿದ್ಯಾರ್ಥಿಗಳು ಭಯಪಡಬೇಡಿ. ಯಾರನ್ನೂ ಕೂಡಾ ಕ್ವಾರಂಟೈನ್ಗೆ ಒಳಪಡಿಸುವುದಿಲ್ಲ. ವಿದ್ಯಾರ್ಥಿನಿಯ ತಂದೆಯನ್ನು ಕೂಡಾ ಆರೋಗ್ಯ ಇಲಾಖೆಯ ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 18 ರಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಬರೆದಿದ್ದ ಬೆಂಗಳೂರಿನ ಓರ್ವ ವಿದ್ಯಾರ್ಥಿನಿಯ ಆರೋಗ್ಯ ಕುರಿತು ಕೆಲ ಗೊಂದಲ ನಿರ್ಮಾಣವಾಗಿತ್ತು. ಆ ವಿದ್ಯಾರ್ಥಿನಿಯ ಸ್ಯಾಂಪಲ್ ನೆಗೆಟಿವ್ ಎಂದು ಫಲಿತಾಂಶ ಬಂದಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಯಾವುದೇ ಆತಂಕಕ್ಕೆ ಆಸ್ಪದವಿಲ್ಲ ಎಂದು ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಬೆಂಗಳೂರಿನ ಜಯನಗರದ ಬಿಇಎಸ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿ ಕ್ವಾರಂಟೈನ್ ಸೀಲ್ ಅಳಿಸಿ ಹಾಜರಾಗಿದ್ದಾಳೆ ಎಂದು ಸುದ್ದಿಯಾಗಿತ್ತು.