ತಿರುವನಂತಪುರಂ, ಜೂ 21 (DaijiworldNews/PY) : ಕೇರಳ ಆರೋಗ್ಯ ಸಚಿವೆ ಶೈಲಜಾ ಕೋವಿಡ್ ರಾಣಿ ಎಂಬ ಬಿರುದು ಪಡೆಯಲು ಮುಂದಾಗಿದ್ದಾರೆ ಎಂದು ಹೇಳಿ ವಿವಾದಕ್ಕೆ ಸಿಲುಕಿರುವ ಕಾಂಗ್ರೆಸ್ ಅಧ್ಯಕ್ಷ ಎಂ.ರಾಮಚಂದ್ರನ್ ಅವರು ಕೋವಿಡ್ ರಾಣಿ ಎಂದಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇರಳದ ಆರೋಗ್ಯ ಸಚಿವೆಯನ್ನು ಕೋವಿಡ್ ರಾಣಿ ಎಂದು ನಾನು ಹೇಳಿದ್ದು ಸರಿ. ನಾನು ಹೇಳಇದ ಹೇಳಿಕೆಯ ಪರವಾಗಿ ನಾನು ನಿಲ್ಲುತ್ತೇನೆ. ನಾನು ಯಾರಿಗೂ ಅವಮಾನ ಮಾಡಲು ಹೋಗಿಲ್ಲ. ಅವರನ್ನು ಕೆಲವು ವಿದೇಶಿ ಮಾಧ್ಯಮಗಳು ರಾಕ್ಸ್ಟಾರ್ ಹಾಗೂ ಕೊರೊನಾವನ್ನು ಕೊಂದವರು ಎಂದು ಬಣ್ಣಿಸುತ್ತಾರೆ. ನಾನು ಕೂಡಾ ಹಾಗೆಯೇ ರಾಣಿಗೆ ಹೋಲಿಕೆ ಮಾಡಿದ್ದೇನೆ. ಈ ಹೇಳಿಕೆಯಲ್ಲಿ ಏನು ತಪ್ಪಿದೆ. ನಾನು ಯಾರನ್ನೂ ಕ್ಷಮೆ ಕೇಳಲು ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಒಂದು ಹೆಣ್ಣಿನ ವಿರುದ್ದ ಹೇಳಿಕೆಯನ್ನು ನೀಡುವಂತ ವ್ಯಕ್ತಿ ನಾನಲ್ಲ. ಮಹಿಳೆಯರ ಕಲ್ಯಾಣ ಹಾಗೂ ಗೌರವಕ್ಕಾಗಿ ನಾನು ಯಾವಾಗಲೂ ಮುಂದೆ ನಿಲ್ಲುವಂತ ವ್ಯಕ್ತಿ. ಹಾಗಾಗಿ ನಾನು ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ.
ಶುಕ್ರವಾರ ಮಾತನಾಡಿದ್ದ ರಾಮಚಂದ್ರನ್ ಅವರು, ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಕೋವಿಡ್ ರಾಣಿ ಎನ್ನುವ ಬಿರುದು ಪಡೆಯಲು ಮುಂದಾಗಿದ್ದರು ಎಂದು ಹೇಳಿದ್ದರು. ಈ ಬಗ್ಗೆ ಕೇರಳದ ಕೆಲ ನಾಯಕರು ಆಗ್ರಹಿಸಿದ್ದು, ಕೈ ನಾಯಕನ ಹೇಳಿಕೆ ಸರಿಯಲ್ಲ. ಒಂದು ಪಕ್ಷದ ನಾಯಕನಾಗಿ ಈ ರೀತಿಯಾದ ಕೀಳು ಮಟ್ಟದ ಹೇಳಿಕೆಯನ್ನು ಒಂದು ಮಹಿಳೆಯ ಬಗ್ಗೆ ನೀಡಬಾರದು. ಹಾಗಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದರು.
ಈ ಹಿಂದೆಯೂ ರಾಮಚಂದ್ರನ್ ಅವರು, ನಿಫಾ ವೈರಸ್ ಸಂದರ್ಭ ಕೂಡಾ ಇದೇ ರೀತಿಯಾದ ಹೇಳಿಕೆಯನ್ನು ನೀಡಿದ್ದು, ಆರೋಗ್ಯ ಸಚಿವೆ ಶೈಲಜಾ ಟೀಚರ್, ಕೋಝಿಕೋಡ್ನಲ್ಲಿ ಅತಿಥಿ ಕಲಾವಿದೆಯಾಗಿದ್ದರು. ಸಚಿವರು ನಿಫಾ ರಾಜಕುಮಾರಿ ಆಗಲು ಪ್ರಯತ್ನಪಡುತ್ತಿದ್ದಾರೆ ಎಂದಿದ್ದರು.