ನವದೆಹಲಿ, ಜೂ.21 (DaijiworldNews/MB) : ಭಾರತದ ಭೂ ಭಾಗವನ್ನೂ ಹೊಂದಿರುವ ನಕ್ಷೆಯನ್ನು ನೇಪಾಳ ಸಂಸತ್ತು ಅನುಮೋದನೆ ಮಾಡಿದ ಹಿನ್ನಲೆ ಈಗಾಗಲೇ ಬಿರುಕುಗೊಂಡಿದ್ದ ಭಾರತ ನೇಪಾಳ ಸಂಬಂಧ ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿದ್ದು ವಿವಾದಿತ ಜಾಗವಾದ ಕಾಲಾಪಾನಿ ಬಳಿ ನೇಪಾಳವು ತನ್ನ ಸೇನಾ ಬ್ಯಾರಕ್ ನಿರ್ಮಾಣಕ್ಕೆ ಸಜ್ಜಾಗಿದೆ.
ಮೇ 8 ರಂದು ಉತ್ತರಾಖಂಡದ ಧಾರ್ಚುಲಾದಿಂದ ಲಿಪುಲೇಖಕ್ಕೆ ಸಂಪರ್ಕ ಕಲ್ಪಿಸುವ 80 ಕಿ.ಮೀಗಳ ರಕ್ಷಣಾ ಕಾರ್ಯತಂತ್ರ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ್ದು ಆ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿದೆ. ರಸ್ತೆ ಕಾಮಗಾರಿ ಉದ್ಘಾಟನೆಯಾದ ಮರುದಿನವೇ ನೇಪಾಳ ಹೊಸ ಭೂಪಟ ಬಿಡುಗಡೆ ಮಾಡಿದೆ. ಬಳಿಕ ಅದು ಸಂಸತ್ತಿನಲ್ಲೂ ಅನುಮೋದನೆಯಾಗಿದೆ. ಇದೀಗ ವಿವಾದಿತ ಜಾಗವಾದ ಕಾಲಾಪಾನಿ ಬಳಿ ನೇಪಾಳವು ತನ್ನ ಸೇನಾ ಬ್ಯಾರಕ್ ನಿರ್ಮಾಣಕ್ಕೆ ಮುಂದಾಗಿದೆ.
ಇನ್ನು ಕಾಲಾಪಾನಿ ಬಳಿ ಸೇನಾ ಬ್ಯಾರಕ್ ನಿರ್ಮಾಣಕ್ಕೆ ಮುಂದಾದ ನೇಪಾಳದ ತೀರ್ಮಾನದ ಹಿಂದೆ ಚೀನಾದ ರಾಯಭಾರಿ ಹೂ ಯಾಂಕಿ ಕೈವಾಡವಿದೆ ಎಂದು ಭಾರತದ ಗುಪ್ತಚರ ಮೂಲಗಳು ತಿಳಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ನೇಪಾಳವು ತನ್ನ ಹೊಸ ನಕ್ಷೆಯಲ್ಲಿ ಭಾರತದ ಭೂ ಭಾಗಗಳಾದ ಲಿಪುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾಗಳನ್ನು ಸೇರಿಸಿದೆ.