ಬೆಂಗಳೂರು, ಜೂ.21 (DaijiworldNews/MB) : ಯೋಗ ಒಂದು ದಿನದ ಪ್ರದರ್ಶನ ಆಗಬಾರದು ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯನವರು ಹೇಳಿದರು.
6ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ತಾನು ಯೋಗ ಮಾಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಅವರು, ಯೋಗ ಒಂದು ದಿನದ ಪ್ರದರ್ಶನ ಆಗಬಾರದು. ನಿರಂತರ ಅಭ್ಯಾಸ ಮಾಡಲು ಪ್ರಯತ್ನಿಸ ಬೇಕು. ಯೋಗಾಭ್ಯಾಸ ವೈಯಕ್ತಿಕವಾಗಿ ನನ್ನ ಆರೋಗ್ಯಕ್ಕೆ ನೆರವಾಗಿದೆ. ನೀವೂ ನಿಮಗಾಗಿ ಯೋಗಾಭ್ಯಾಸ ಮಾಡಿ ಎಂದು ಹೇಳಿದ್ದಾರೆ.
ಇನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಪದ್ಮನಾಭ ನಗರದ ನಿವಾಸದಲ್ಲಿ ಯೋಗಾಭ್ಯಾಸ ನಡೆಸಿದ್ದು ಈ ವಿಡಿಯೋವನ್ನು ಟ್ವೀಟ್ ಮಾಡಿ, ವಿಶ್ವ ಯೋಗ ದಿನದ ಶುಭಾಶಯಗಳು. ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಒಂದು ಸಮಗ್ರ ವಿಧಾನ ಎಂದು ಹೇಳಿದ್ದಾರೆ.