ನವದೆಹಲಿ, ಜೂ 21 (DaijiworldNews/PY) : ಚೀನಾ ಸೇನೆಯಿಂದ ವಾಸ್ತವ ನಿಯಂತ್ರಣ ರೇಖೆಯಲ್ಲಿ ಉಂಟಾಗಬಹುದಾದ ಎಲ್ಲ ಅಪಾಯಗಳನ್ನು ಎದುರಿಸುವ ಸಲುವಾಗಿ ಸೇನೆಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ವಾಯುಪಡೆ ಕೂಡಾ ಕಾರ್ಯಚರಣೆ ನಡೆಸಲು ಪೂರ್ವ ಲಡಾಖ್ನ ಆಯಕಟ್ಟಿನ ಜಾಗಗಳನ್ನು ಗುರುತಿಸಿ ಸಮರಕ್ಕೆ ಸಜ್ಜಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಪೂರ್ವ ಲಡಾಖ್ನ ಪರಿಸ್ಥಿತಿಯ ಬಗ್ಗೆ ನಡೆಸಿದ ಉನ್ನತ ಮಟ್ಟದ ಸಭೆ ನಂತರ ಈ ಸೂಚನೆಯನ್ನು ನೀಡಲಾಗಿದೆ ಎನ್ನಲಾಗಿದೆ.
ಮೂರು ಪಡೆಗಳ ಮುಖ್ಯಸ್ಥರಿಗೆ ಈ ಬಗ್ಗೆ ಸೂಚನೆ ನೀಡಿದ್ದು, ಚೀನಾದ ಗಡಿಯುದ್ದಕ್ಕೂ ಕಠಿಣ ಕಣ್ಗಾಗವಲು ನೀತಿ ಅಳವಡಿಸಿಕೊಳ್ಳುವಂತೆ ತಿಳಿಸಿದೆ. ಚೀನಾ ಪಡೆಗಳ ಪ್ರಚೋದನಾತ್ಮಕ ವರ್ತನೆಗಳಿಗೆ ಸೂಕ್ತವಾಗ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ಎಸ್ಕೆ ಭದೌರಿಯಾ, ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ, ನೌಕಾ ಮುಖ್ಯಸ್ಥ ಅಡ್ಮರಲ್ ಕರಮಬೀರ್ ಸಿಂಗ್ ಇದ್ದರು.