ಹೈದರಾಬಾದ್, ಜೂ 21 (DaijiworldNews/PY) : ಎಐಸಿಸಿಯ ತೆಲಂಗಾಣ ಕಾರ್ಯದರ್ಶಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ ರಾವ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಕೊರೊನಾ ವೈರಸ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಸ್ವತಃ ಹನುಮಂತ ರಾವ್ ಅವರೇ ಪರೀಕ್ಷೆಗೆ ಒಳಗಾದ ನಂತರ ಸೋಂಕು ತಗುಲಿರುವುದು ಖಚಿತವಾಗಿದೆ. ಚಿಕಿತ್ಸೆಗಾಗಿ ಅವರನ್ನು ಭಾನುವಾರ ಹೈದರಾಬಾದ್ನ ಖಾಸಗಿ ಆಸ್ಪತ್ರೆ ಕರೆದೊಯ್ಯಲಾಗಿದೆ.
ಲಾಕ್ಡೌನ್ ಅವಧಿಯಲ್ಲಿ ಹನುಮಂತ ರಾವ್ ಅವರು ಆರೋಗ್ಯ ಕಾರ್ಯಕರ್ತರು ಹಾಗೂ ನಿರ್ಗತಿಕರಿಗೆ ಪಡಿತರ, ಸ್ಯಾನಿಟೈಸೇಶನ್ ಕಿಟ್ಗಳನ್ನು ವಿತರಿಸುತ್ತಿದ್ದರು. ಅಲ್ಲದೇ ಕೊರೊನಾ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಇತ್ತೀಚೆಗೆ ಇವರು ನೀರಾವರಿ ಯೋಜನೆಗಳ ಬಗ್ಗೆ ತೆಲಂಗಾಣ ಸರ್ಕಾರದ ವಿರುದ್ದ ಆಯೋಜನೆ ಮಾಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡಿದ್ದರು.
ವಿಹೆಚ್ ಅವರು, ಆಸ್ಪತ್ರೆಯಲ್ಲಿ ಭದ್ರತೆ ಹಾಗೂ ಸುರಕ್ಷತಾ ಸಲಕರಣೆಗಳ ಕೊರತೆಯನ್ನು ವಿರೋಧಿಸಿ ಕಿರಿಯ ವೈದ್ಯರು ನಡೆಸುತ್ತಿದ್ದ ಪ್ರತಿಭಟನೆಯ ಪರವಾಗಿ ನಿಲ್ಲಲು ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿದ್ದು, ವೈದ್ಯರಿಗೆ ಬೆಂಬಲ ನೀಡಿದ್ದರು. ಅವರಿಗೆ ಈ ಸಂದರ್ಭ ವೈರಸ್ ತಗುಲಿರಬಹುದೇ ಎನ್ನುವ ಗಾಳಿ ಸುದ್ದಿ ಹರಡಿದೆ.
ವಿಹೆಚ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ನಂತರ ಅವರ ಒಡನಾಟದಲ್ಲಿದ್ದ ಎಲ್ಲರನ್ನೂ ಸೆಲ್ಫ್ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.