ನವದೆಹಲಿ, ಜೂ 21 (DaijiworldNews/PY) : ಕೊರೊನಾ ಬಾಧಿತ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸುಧಾರಿಸುತ್ತಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಚಿವರಿಗೆ ಹೆಚ್ಚಿನ ಚಿಕಿತ್ಸೆಯೆ ಅಗತ್ಯ ಬಂದರೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರ ತಂಡವೊಂದು ವೈದ್ಯರಿಗೆ ಸಹಾಯ ಮಾಡಲು ಸಿದ್ದವಾಗಿದೆ ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಶನಿವಾರ ದೆಹಲಿಯ ಸಾಕೇತ್ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಜೈನ್ ಅವರಿಗೆ ಪ್ಲಸ್ಮಾ ಥೆರಪಿ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಜೈನ್ ಅವರನ್ನು ಮೊದಲು ಆರ್ಜಿಎಸ್ಎಸ್ಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಆರೋಗ್ಯದ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಆರ್ಜಿಎಸ್ಎಸ್ಎಚ್ ಆಸ್ಪತ್ರೆಯು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾದ ಕಾರಣ ಪ್ಲಾಸ್ಮಾ ಥೆರಪಿಗೆ ಅಲ್ಲಿ ಅನುಮತಿ ಇಲ್ಲ. ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡುವು ಮುನ್ನ ನಾವು ಎಲ್ಲಾ ರೀತಿಯಾದ ಚಿಕಿತ್ಸೆ ನೀಡಿದ್ದರೂ ಅವರ ಆರೋಗ್ಯ ಸ್ಥಿತಿ ಸುಧಾರಿಸಿಲ್ಲ ಎಂದು ಎಂದು ರಾಜೀವ್ ಗಾಂಧಿ ಆಸ್ಪತ್ರೆಯ ಮೂಲಗಳು ಹೇಳಿವೆ.
ಸತ್ಯೇಂದರ್ ಜೈನ್ ಅವರಿಗೆ ಜೂನ್ 17ಕ್ಕೆ ಕೊರೊನಾ ದೃಢಪಟ್ಟಿದ್ದು, ಮರುದಿವಸ ಅವರನ್ನು ಆರ್ಜಿಎಸ್ಎಸ್ಎಚ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.