ಶ್ರೀನಗರ, ಜೂ.22 (DaijiworldNews/MB) : ನಾಲ್ಕು ಪ್ರಮುಖ ಉಗ್ರ ಸಂಘಟನೆಗಳ ನಾಲ್ವರು ಮುಖ್ಯಸ್ಥರನ್ನು ಕಳೆದ ನಾಲ್ಕು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರತಾ ಪಡೆಗಳು ಲಷ್ಕರ್ ಇ- ತೊಯ್ಬಾ, ಜೈಷ್ -ಇ- ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್, ಅನ್ಸಾರ್ ಘಾಜ್ವಾತ್ -ಉಲ್- ಹಿಂದ್ ಸಂಘಟನೆಯ ನಾಲ್ವರು ಮುಖ್ಯಸ್ಥರನ್ನು ಹತ್ಯೆ ಮಾಡಿದ್ದು ಅದಕ್ಕಾಗಿ ಭದ್ರತಾ ಪಡೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಹಾಗೆಯೇ ಈ ಪ್ರಮುಖ ನಾಯಕರ ಹತ್ಯೆಯಿಂದಾಗಿ ಉಗ್ರ ಸಂಘಟನೆಗೆ ಭಾರೀ ಹಾನಿಯಾಗಿದೆ ಎಂದು ತಿಳಿಸಿದರು.
ಇನ್ನು ಈ ಸಂದರ್ಭದಲ್ಲಿ ಶ್ರೀನಗರದ ಜಾಬಿದಾಲ್ ಬಳಿ ನಡೆದ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿದ ವಿಜಯ್ ಕುಮಾರ್, ಶರಣಾಗಲು ತಿಳಿಸಿದರೂ ಅವರು ಗ್ರೇನೆಡ್ಗಳನ್ನು ಎಸೆದರು. ಆ ಬಳಿಕ ಗುಂಡಿನ ಚಕಮಕಿ ನಡೆದಿದ್ದು ಸಾವನ್ನಪ್ಪಿದ್ದಾರೆ. ಇನ್ನು ಆ ಮೃತರ ಪೈಕಿ ಇಬ್ಬರ ಗುರುತು ಪತ್ತೆಯಾಗಿಲ್ಲ ಎಂದು ಹೇಳಿದರು.
ಪಾಕ್ ಡ್ರೋನ್ನ್ನು ಹೊಡೆದುರುಳಿಸಲಾಗಿದ್ದು ಪಾಕ್ ಡ್ರೋಣ್ ಮೂಲಕ ಉಗ್ರ ಫಾರ್ಕನ್ ಗೆ ಎಂ4 ರೈಫಲ್ಸ್ ಕಳುಹಿಸಿರುವ ಸಾಧ್ಯತೆಯ ಬಗ್ಗೆ ಮಾಹಿತಿ ಲಭಿಸಿದೆ ಎಂದು ತಿಳಿಸಿದರು.