ನವದೆಹಲಿ, ಜೂ.22 (DaijiworldNews/MB) : ಕಳೆದ ಎರಡು ತಿಂಗಳು ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ಸ್ ದರ ದಾಖಲೆಯ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲ್ಲೇ ಇದ್ದು ಸತತ 16 ನೇ ದಿನವೂ ಕೂಡಾ ದರ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 33 ಪೈಸೆ ಹೆಚ್ಚಳವಾಗಿ 79.56ರೂ. ಆಗಿದ್ದರೆ ಡೀಸೆಲ್ 58 ಪೈಸೆ ಹೆಚ್ಚಳವಾಗಿ 78.85 ರೂ. ಬೆಲೆಗೆ ಏರಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 34 ಪೈಸೆ ಹೆಚ್ಚಳವಾಗಿ 82.15 ಆಗಿದ್ದರೆ ಡೀಸೆಲ್ 55 ಪೈಸೆ ಹೆಚ್ಚಳವಾಗಿ 74.98 ಬೆಲೆಗೆ ಏರಿಕೆ ಕಂಡಿದೆ.
ಮಾರ್ಚ್ 14ರಂದು ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ 3 ರೂ. ಹೆಚ್ಚಳ ಮಾಡಿದ್ದು ಮೇ 5ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ತೆರಿಗೆ10 ರೂ. ಹಾಗೂ ಡೀಸೆಲ್ಗೆ 13 ರೂ.ಹೆಚ್ಚಿಸಿತ್ತು. ಇದರಿಂದ ಸರ್ಕಾರಕ್ಕೆ 2 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆ ವರಮಾನ ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ.