ಚೆನ್ನೈ, ಜೂ 22 (Daijiworld News/MSP): ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಖ್ಯಾತ ಚಿತ್ರನಟ ಹಾಗೂ ಮಕ್ಕಲ್ ನೀಧಿ ಮಾಯಂ (ಎಂಎನ್ಎಂ) ಪಕ್ಷದ ನಾಯಕ ಕಮಲ್ ಹಾಸನ್ ಪ್ರತಿಕ್ರಿಯಿಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಜೂನ್ 19ರಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ 'ಭಾರತದ ಗಡಿ ಪ್ರದೇಶವನ್ನು ಯಾರು ಒಂದಿಂಚೂ ಭೂಪ್ರದೇಶವನ್ನು ಆಕ್ರಮಿಸಿಕೊಂಡಿಲ್ಲ' ಎಂದಿದ್ದರು.
ಈ ಹೇಳಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಅವರು" ಪ್ರಧಾನಿ ಮೋದಿ ಇಂತಹ ಹೇಳಿಕೆ ನೀಡಿ ಭಾವನಾತ್ಮಕವಾಗಿ ಜನರ ಬಾಯಿಯನ್ನು ಮುಚ್ಚಿಸುತ್ತಿದ್ದಾರೆ. ಈ ರೀತಿಯ ಕಿಡಿಗೇಡಿತನದ ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಪ್ರಧಾನಿ ಮತ್ತು ಅವರ ಬೆಂಬಲಿಗರಿಗೆ ಕೋರುತ್ತೇನೆ " ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇಂಥ ವಿಷಯವನ್ನು ಈ ರೀತಿ ಕುಶಲತೆಯಿಂದ ನಿರ್ವಹಿಸುವುದರಲ್ಲೇ ಕಿಡಿಗೇಡಿತನವಿದೆ. ಭಾವನಾತ್ಮಕವಾಗಿ ಜನರನ್ನು ಮೋಸಗೊಳಿಸುವ, ಸಂದಿಗ್ಧ ಸಮಯದಲ್ಲಿ ಕುಶಲಮತಿಗಳಾಗಿ ಯಾಮಾರಿಸುವ, ಟೀಕೆ ಮಾಡಿದ ಪ್ರತಿಪಕ್ಷಗಳನ್ನೇ ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ. ಚೀನಾ ನಮ್ಮ ಸೈನಿಕರನ್ನು ನಿರಾಯುಧವಾಗಿ ಕೊಲ್ಲುವ ಮೂಲಕ ಬೆನ್ನಿಗೆ ಚೂರಿ ಇರಿದಿದ್ದಾರೆ. ಕೇಂದ್ರ ಸರ್ಕಾರ ಅವರ ತಂತ್ರಗಳನ್ನು ಅರಿಯುವಲ್ಲಿ ವಿಫಲವಾಗಿದೆ. ಅದರೂ ಕೇಂದ್ರ ಮಾತಿನಲ್ಲೇ ಜನರನ್ನು ಯಾಮಾರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.