ಅಲಿಗರ್, ಜೂ 22(DaijiworldNews/PY) : ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರ ಸಾವಿಗೆ ಕಾರಣರಾದವರ ವಿರುದ್ದ ಸೇಡು ತೀರಿಸಿಕೊಳ್ಳಲು ಹೊರಟ 10 ಮಕ್ಕಳನ್ನು ಪೊಲೀಸರು ತಡೆದ ಘಟನೆ ಅಲಿಗರ್ನಲ್ಲಿ ನಡೆದಿದೆ.
ಈ ಬಗ್ಗೆ ಪೊಲೀಸರು ಮಕ್ಕಳನ್ನು ವಿಚಾರಿಸಿದಾಗ, ನಾವು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹೋಗುತ್ತಿದ್ದೇವೆ. ಅವರು ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಚಾರವನ್ನು ಕೇಳಿದ ಪೊಲೀಸರಿಗೆ ಆಶ್ಚರ್ಯವಾಗಿದ್ದು, ಮಕ್ಕಳು ತಾಯ್ನಾಡಿನ ಮೇಲಿಟ್ಟಿರುವ ಪ್ರೀತಿಯನ್ನು ಶ್ಲಾಘಿಸಿದರು.
ನೀವುಬೆಳೆದು ದೊಡ್ಡವರಾಗಿ ಉದ್ಯೋಗಕ್ಕೆ ಅರ್ಹರಾಗುವವರೆಗೂ ಶತ್ರುಗಳ ವಿರುದ್ಧ ಹೋರಾಡುವ ಅಗತ್ಯವಿಲ್ಲ. ನಾವು ಇರುವವರೆಗೆ ನೀವು ಹೋರಾಡಬೇಕಿಲ್ಲ. ನೀವು ಮನೆಯಲ್ಲೇ ಇದ್ದು ನಿಮ್ಮ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತ-ಚೀನಾ ಸೇನಾಪಡೆಗಳ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ್ದ ಸಂಘರ್ಷದಲ್ಲಿ ಭಾರತದ ಒಬ್ಬ ಸೇನಾಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದಾರೆ.