ನವದೆಹಲಿ, ಜೂ.22 (DaijiworldNews/MB) : ಪ್ರಧಾನಿಯಾಗಿರುವ ಮೋದಿಯವರು ಬಳಸುವ ಪದಗಳ ಪರಿಣಾಮದ ಕುರಿತಾಗಿಯೂ ಯೋಚಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದಾರೆ.
ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇದು ಐತಿಹಾಸಿಕವಾಗಿ ಕವಲು ದಾರಿಯಲ್ಲಿ ಇರುವ ಸಂದರ್ಭವಾಗಿದ್ದು ಈಗ ಸರ್ಕಾರ ಕೈಗೊಳ್ಳುವ ತೀರ್ಮಾನ ನಮ್ಮ ಮುಂದಿನ ಪೀಳಿಗೆ ವಿಮರ್ಶಿಸುತ್ತದೆ. ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಯಾವ ರೀತಿ ವಿಮರ್ಶಿಸುತ್ತದೆ ಎಂಬ ಬಗ್ಗೆ ಯೋಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.
ನಮ್ಮ ಪ್ರಜಾಪ್ರಭುತ್ವವವು ತೀರ್ಮಾನ ಕೈಗೊಳ್ಳುವ ಈ ಹೊಣೆಯನ್ನು ಪ್ರಧಾನ ಮಂತ್ರಿ ಕಚೇರಿಗೆ ನೀಡಿದ್ದು ರಾಷ್ಟ್ರೀಯ ಭದ್ರತೆ, ಕಾರ್ಯತಂತ್ರ ಹಾಗೂ ಪ್ರಾದೇಶಿಕ ಹಿತಾಸಕ್ತಿಗಳಿಗೆ ಯಾವ ಧಕ್ಕೆಯೂ ಉಂಟಾಗದಂತೆ ಪ್ರಧಾನಿಯವರು ತಾವು ಬಳಸುವ ಪದಗಳ ಪರಿಣಾಮದ ಬಗೆಯೂ ಯೋಚಿಸಿ ಮಾತನಾಡಬೇಕು. ಮಾತು ಎದುರಾಳಿಗಳಿಗೆ ಅಸ್ತ್ರವಾಗಬಾರದು. ಹಾಗೆಯೇ ತಪ್ಪು ಮಾಹಿತಿ ನೀಡುವುದು ಖಡಕ್ ನಾಯಕತ್ವಕ್ಕೆ ಸರಿಯಲ್ಲ ಎಂದು ತಿಳಿಸಿದ್ದಾರೆ.
ಲಡಾಖ್ ವಿಚಾರವಾಗಿ ಇದೇ ಮೊದಲ ಬಾರಿಗೆ ಮಾತನಾಡಿರುವ ಅವರು, ಸರ್ಕಾರವು ಕರ್ನಲ್ ಬಿ.ಸಂತೋಷ್ ಬಾಬು ಮತ್ತು ನಮ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿ ನಮ್ಮ ದೇಶದ ಸಾರ್ವಭೌಮತೆ ಕಾಪಾಡಲು ಯೋಧರು ಮಾಡಿರುವ ಬಲಿದಾನದ ಯಾವುದೇ ಕಾರಣಕ್ಕೂ ವ್ಯರ್ಥವಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ಸರ್ಕಾರ ಈ ವಿಚಾರವನ್ನು ಕಡೆಗಣಿಸಿದ್ದಲ್ಲಿ ಜನರು ಸರ್ಕಾರದ ಮೇಲೆ ಇರಿಸಿರುವ ನಂಬಿಕೆಗೆ ದ್ರೋಹ ಮಾಡಿದ್ದಂತೆ ಆಗುತ್ತದೆ. ಈ ಉದ್ವಿಗ್ನ ಪರಿಸ್ಥಿತಿಯಲ್ಲಿ ಸರ್ಕಾರ ಎಚ್ಚರದಿಂದ ಇರಬೇಕು ಎಂದು ಹೇಳಿದ್ದಾರೆ.
ಚೀನಾವು ಪ್ರಚೋದನಾಕಾರಿಯಾಗಿ ವರ್ತಿಸುತ್ತಿದ್ದು ಗಲ್ವಾನ್ ಕಣಿವೆ ಮತ್ತು ಪಾನ್ಗೊಂಗ್ ತ್ಸೊ ಸರೋವರದ ಆಸುಪಾಸಿನಲ್ಲಿ ಭಾರತಕ್ಕೆ ಸೇರಿದ ಭೂಮಿಯನ್ನು ತನ್ನದು ಎಂದು ವಾದ ಮಾಡುತ್ತಿದೆ. ಈ ಬೆದರಿಕೆಗಳಿಗೆ ನಾವು ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.