ಭೋಪಾಲ್, ಜೂ 22 (Daijiworld News/MSP): "ಕಾಂಗ್ರೆಸ್ ಪಕ್ಷವೂ ನನಗೆ ನೀಡಿದ ನಾನಾ ವಿಧದ ‘ಚಿತ್ರ ಹಿಂಸೆ’ಯಿಂದಾಗಿ ನಾನು ಹಲವು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದೇನೆ"ಎಂದು ಭೋಪಾಲ್ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಆರೋಪಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಆಡಳಿತಾವಧಿಯಲ್ಲಿ 9 ವರ್ಷಗಳ ಕಾಲ ನನಗೆ ಸಾಕಷ್ಟು ವಿಧವಾಗಿ ಚಿತ್ರಹಿಂಸೆ ನೀಡಿದ್ದರಿಂದ ನಾನು ಮಾನಸಿಕವಾಗಿ ಜರ್ಜರಿತಳಾಗಿದ್ದೇನೆ . ಇದರಿಂದ ನನಗೀಗ ಒಂದು ಕಣ್ಣು ಸರಿಯಾಗಿ ಕಾಣುವುದಿಲ್ಲ. ನಾನು ಅನುಭವಿಸುತ್ತಿರುವ ದೃಷ್ಟಿ ದೋಷ, ಮೆದುಳು ಸಮಸ್ಯೆ ಎಲ್ಲ ಆರೋಗ್ಯ ತೊಂದರೆಗೂ ಕಾಂಗ್ರೆಸ್ ಕಾರಣವಾಗಿದೆ ಎಂದು ದೂರಿದ್ದಾರೆ.
ಪ್ರಜ್ಞಾ ಸಿಂಗ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಪಿ.ಸಿ.ಶರ್ಮಾ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತವಿದ್ದದ್ದು ಕೆಲವೇ ವರ್ಷ, ಅಲ್ಲಿ 15 ವರ್ಷಗಳ ಕಾಲ ಬಿಜೆಪಿ ಆಡಳಿತವಿತ್ತು ಇದರೊಂದಿಗೆ ಕೇಂದ್ರದಲ್ಲಿ ಆರು ವರ್ಷಗಳ ಹಿಂದಿನಿಂದಲೂ ಅವರದ್ದೇ ಸರ್ಕಾರವಿದೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ನಿಂದ ಅವರಿಗೆ ಹೇಗೆ ತೊಂದರೆಯಾಯಿತು ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.