ಶ್ರೀನಗರ, ಜೂ 22(DaijiworldNews/PY) : ಪಾಕಿಸ್ತಾನ ಸೇನಾ ಪಡೆಗಳು ಜಮ್ಮು-ಕಾಶ್ಮೀರ ಗಡಿ ನಿಯಂತ್ರಣ ರೇಖೆಯ ಪ್ರದೇಶಗಳಲ್ಲಿ ಗಡಿ ಉಲ್ಲಂಘಿಸಿ ಬಂದು ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.
ಸೋಮವಾರ ನಸುಕಿನ ಮುಂಜಾನೆ 3.30ರ ಸುಮಾರಿಗೆ ಪೂಂಚ್ ಜಿಲ್ಲೆಯ ಕೃಷ್ಣನಗಾಟಿ ವಲಯದಲ್ಲಿ ಪಾಕ್ ಪಡೆಯು ಅಪ್ರಚೋದಿತ ಗುಂಡು ಹಾಗೂ ಶಸ್ತ್ರಾಸ್ತ್ರ ದಾಳಿ ಆರಂಭಿಸಿತ್ತು, ಬೆಳಗ್ಗೆ 5.30 ರ ಸುಮಾರಿಗೆ ಕೂಡಾ ಪಾಕ್ ಸೇನೆ ರಜೌರಿ ಜಿಲ್ಲೆಯ ನೌಶೆರಾ ವಲಯದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಗೆ ಗಡಿ ನಿಯಂತ್ರಣ ರೇಖೆಯ ಹತ್ತಿರ ನೌಶೆರಾ ವಲಯದ ಪ್ರದೇಶದಲ್ಲಿ ಕಾವಲು ಕಾಯುತ್ತಿದ್ದ ಸೇನಾ ಯೋಧ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭ ಮೃತಪಟ್ಟಿದ್ದಾರೆ.
ಜೂನ್ ತಿಂಗಳಿನಲ್ಲಿ ಪಾಕ್ ಯೋಧರು ಜಮ್ಮು-ಕಾಶ್ಮೀರದ ಪೂಂಚ್ ಹಾಗೂ ರಜೌರಿ ಜಿಲ್ಲೆಯಲ್ಲಿ ನಡೆಸಿದ ದಾಳಿಗೆ ಹುತಾತ್ಮರಾಗುತ್ತಿರುವ ನಾಲ್ಕನೇ ಸೇನಾ ಯೋಧರಾಗಿದ್ಧಾರೆ.