ಎರ್ನಾಕುಲಂ, ಜೂ 22 (Daijiworld News/MSP): 54 ದಿನದ ತನ್ನದೇ ನವಜಾತ ಕೂಸನ್ನು ತಂದೆಯೇ ಗೋಡೆಗೆ ಬಡಿದ ಬೀಭತ್ಸ ಘಟನೆ ಎರ್ನಾಕುಲಂ ಸಮೀಪದ ಕೊಲಂಚೆರಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ಮಗುವಿಗೆ ಬ್ರೇನ್ ಹೆಮರೇಜ್ ಆಗಿದ್ದು, ಕೊಲಂಚೆರಿ ಮೆಡಿಕಲ್ ಮಿಷನ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಘಟನೆ ನಡೆದು ಎರಡೇ ಗಂಟೆಯಲ್ಲಿ ಮಗುವಿನ ತಂದೆ ಅಂಗಮಾಲಿ ನಿವಾಸಿ ಶೈಜು ಥಾಮಸ್(40) ಪೊಲೀಸರು ಬಂಧಿಸಿದ್ದಾರೆ.
" ಮಗು ಮಂಚದಿಂದ ಕೆಳಕ್ಕೆ ಬಿದ್ದು ಗಾಯಗೊಂಡಿದೆ ಚಿಕಿತ್ಸೆ ನೀಡಿ ಎಂದು ಮಗುವಿನ ಪಾಲಕರು ವೈದ್ಯರ ಬಳಿ ಹೇಳಿದ್ದರು. ಆದರೆ ಮಗುವನ್ನು ಗಮನಿಸಿದ ಬಳಿಕ ಸಂದೇಹ ಬಂದು ಮತ್ತೆ ವಿಚಾರಿಸಿದಾಗ, ಪಾಲಕರು ಸೊಳ್ಳೆ ಬ್ಯಾಟ್ ಬಳಸಿದ ವೇಳೆ ಆಕಸ್ಮಿಕವಾಗಿ ಮಗುವಿಗೆ ತಗುಲಿ ಏಟು ಬಿದ್ದಿದೆ ಎಂದಿದ್ದರು. ಹೀಗೆ ಎರಡು ಮೂರು ಬಾರಿ ತಮ್ಮ ಹೇಳಿಕೆ ಬದಲಾಯಿಸುವಾ ಪಾಲಕರನ್ನು ಕಂಡು ಸಂಶಯವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ" ಎಂದು ಕೊಲಂಚೆರಿ ಮಡಿಕಲ್ ಕಾಲೇಜಿನ ಡಾ.ಸೋಜನ್ ಐಪ್ ಮಾಹಿತಿ ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮಗುವಿನ ಶೈಜು ಥಾಮಸ್ ನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ " ಫೇಸ್ಬುಕ್ ಮೂಲಕ ಪರಿಚಯವಾದ ನೇಪಾಳ ಮೂಲದ ಯುವತಿಯನ್ನು ಪ್ರೇಮಿಸಿ ನೇಪಾಳದಲ್ಲೇ ಕಳೆದ ವರ್ಷ ಮದುವೆಯಾಗಿರುವುದಾಗಿ ಕಳೆದ 10 ತಿಂಗಳಿಂದ ಭಾರತಕ್ಕೆ ಬಂದು ಅಂಗಮಾಲಿಯ ಜೋಸ್ಪುರಂನಲ್ಲಿ ವಾಸವಿದ್ದೆವು. ಹೆಣ್ಣು ಮಗು ಜನಿಸಿದ್ದರಿಂದ ಭಾರಿ ನಿರಾಶೆಗೊಳಗಾಗಿದ್ದು, ಆ ಮಗುವಿನ ತಂದೆಯ ನಾನಲ್ಲ ಎಂಬ ಸಂದೇಹ ಬಂದಿತ್ತು.
ಕಳೆದ ಗುರುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಗು ಅಳುವುದಕ್ಕೆ ಶುರುಮಾಡಿದಾಗ ಅಸಹನೆ ಉಂಟಾಗಿ ಪತ್ನಿ ಕೈಯಲ್ಲಿದ್ದ ಮಗುವನ್ನು ಬಲವಂತವಾಗಿ ಹಿಡಿದೆಳೆದು ಮಗುವಿನ ಕಾಲು ಹಿಡಿದು ಎರಡು ಬಾರಿ ಗೋಡೆಗೆ ಬಡಿದೆ" ಎಂದು ಶೈಜು ಥಾಮಸ್ ಘಟನೆ ಬಗ್ಗೆ ವಿವರಿಸಿದ್ದಾನೆ .
ಸದ್ಯ ಮಗುವಿನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆ ಮಗುವಿನ ತಮ್ದೆ ವಿರುದ್ದ ಮೆಡಿಕೋ ಲೀಗಲ್ ಕೇಸ್ ದಾಖಲಿಸಿದೆ.