ನವದೆಹಲಿ, ಜೂ 22(DaijiworldNews/PY) : ಪುರಿ ಜಗನ್ನಾಥ ರಥಯಾತ್ರೆಗೆ ಅವಕಾಶ ನೀಡಬೇಕು ಎಂದು ಸೋಮವಾರ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು, ಸಾಂಪ್ರದಾಯಿಕವಾಗಿ ರಥಯಾತ್ರೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಲಾಗಿದೆ.
ಪುರಿ ಜಗನ್ನಾಥ ಯಾತ್ರೆಯು ಈ ತಿಂಗಳ 23ರಿಂದ ಆರಂಭವಾಗಬೇಕಿತ್ತು. ಆದರೆ, ಸುಪ್ರೀಂ ಕೋರ್ಟ್ ಕೊರೊನಾ ಹಿನ್ನೆಲೆಯಲ್ಲಿ ಈ ತಿಂಗಳ 18ರಂದು ತಡೆಯಾಜ್ಞೆ ನೀಡಿತ್ತು.
ಕೋಟ್ಯಾಂತರ ಜನರ ನಂಬಿಕೆ, ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಆ ತೀರ್ಪನ್ನು ಪುನರ್ ಪರಶೀಲಿಸಬೇಕು ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮನವಿ ಮಾಡಿದರು. ಅಲ್ಲದೇ, ಒಡಿಶಾ ಕೂಡಾ ಈ ಮನವಿಗೆ ಬೆಂಬಲ ಸೂಚಿಸಿದೆ.
ಪುರಿಯ ಜಗನ್ನಾಥ ರಥಯಾತ್ರಗೆ ಅವಕಾಶ ನೀಡುವಂತೆ ಕೋರಿ ಸಲ್ಲಿಕೆ ಮಾಡಿರುವ ಅರ್ಜಿಗಳ ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ರಚಿಸಲು ಒಪ್ಪಿಗೆ ಸೂಚಿಸಿದ್ದಾರೆ.