ಬೆಂಗಳೂರು, ಜೂ 22 (Daijiworld News/MSP): ಉನ್ನತ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಂತ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಇದರ ಬೆನ್ನಲ್ಲೇ ಸುಧಾಕರ್ ತಂದೆಯ ಆರೋಗ್ಯದಲ್ಲೂ ಏರುಪೇರು ಕಂಡುಬಂದಿದ್ದು ಜ್ವರ ಹಾಗೂ ಕೆಮ್ಮು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಖುದ್ದು ಸಚಿವರೇ ಟ್ವೀಟ್ ಮಾಡಿದ್ದು "ನನ್ನ 82 ವರ್ಷ ಪ್ರಾಯದ ತಂದೆಯ ಆರೋಗ್ಯದಲ್ಲೂ ಏರುಪೇರು ಆಗಿದ್ದು ಜ್ವರ ಹಾಗೂ ಕೆಮ್ಮು ಕಂಡುಬಂದಿದೆ. ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ " ಎಂದಿದ್ದಾರೆ.
ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಸಚಿವರ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಸುಧಾಕರ್ ಅವರು ತಾವು ಸ್ವಯಂ ಕ್ವಾರಂಟೈನ್ ಆಗುವುದಾಗಿ ಹೇಳಿದ್ದು ಯಾರನ್ನೂ ಭೇಟಿಯಾಗದಂತೆ ತೀರ್ಮಾನ ಕೈಗೊಂಡಿದ್ದಾರೆ. ಇದೇ ಕಾರಣಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿನ ಕೊರೊನಾ ಸೋಂಕಿನ ಏರಿಕೆಯ ಬಗ್ಗೆ ಸಚಿವರು, ಅಧಿಕಾರಿಗಳ ಮಹತ್ವದ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.