ಕಾನ್ಪುರ, ಜೂ.22 (DaijiworldNews/MB) : ಮಕ್ಕಳ ನಿರಾಶ್ರಿತರ ಕೇಂದ್ರದಲ್ಲಿದ್ದ 57 ಅಪ್ರಾಪ್ರ ಬಾಲಕಿಯರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕಾನ್ಪುರ ಜಿಲ್ಲೆಯ ಸ್ವರೂಪ್ ನಗರದ ಶೆಲ್ಟರ್ ಹೋಂ ನಲ್ಲಿ ನಡೆದಿದ್ದು ಪರೀಕ್ಷೆಗೆ ಒಳಪಡಿಸಿದಾಗ ಈ 57 ಅಪ್ರಾಪ್ತ ಬಾಲಕಿಯರ ಪೈಕಿ ಐವರು ಗರ್ಭಿಣಿಯರಾಗಿರುವುದು ತಿಳಿದು ಬಂದಿದೆ ಎಂದು ವರದಿಯಾಗಿದೆ.
ಸರ್ಕಾರ ನಡೆಸುತ್ತಿರುವ ಶೆಲ್ಟರ್ ಹೋಂ ಆಗಿರುವ ಇಲ್ಲಿಯ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಸೋಂಕಿತ 57 ಅಪ್ರಾಪ್ತ ಬಾಲಕಿಯರ ಪೈಕಿ ಐವರು ಹಾಗೂ ಸೋಂಕು ದೃಢಪಟ್ಟಿರದ ಇಬ್ಬರು ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಶೆಲ್ಟರ್ ಹೋಂ ಆಡಳಿತ ಮಂಡಳಿ, ಬಾಲಕಿಯರು ಇಲ್ಲಿಗೆ ಬರುವ ಮೊದಲೇ ಗರ್ಭಿಣಿಯರಾಗಿದ್ದರು, ಮಕ್ಕಳ ರಕ್ಷಣಾ ಸಮಿತಿಯ ಶಿಫಾರಸಿನ ಮೇರೆಗೆ ಇವರನ್ನು ಇಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಹೇಳಿದೆ.
ಇಲ್ಲಿ ಕೊರೊನಾ ಸೋಂಕು ಹೇಗೆ ಹರಡಿದೆ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸದ್ಯ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶೆಲ್ಟರ್ ಹೋಂ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ.