ಬೆಂಗಳೂರು, ಜೂ 22 (Daijiworld News/MSP): ನಮ್ಮ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯೇ ಪ್ರಮುಖ ಮಾನದಂಡವಾಗಿರುವುದರಿಂದ ಮಕ್ಕಳ ಹಿತದೃಷ್ಟಿಯಿಂದ ಮತ್ತು ಮಕ್ಕಳ ಇಚ್ಛೆಗನುಗುಣವಾಗಿ ಘನ ಉಚ್ಛ ಮತ್ತು ವರಿಷ್ಠ ನ್ಯಾಯಾಲಯಗಳ ಆದೇಶ ಮತ್ತು ಅಗತ್ಯ ಸೂಚನೆಗಳನ್ವಯ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತ್ತಿರುವುದರಿಂದ ಮಕ್ಕಳ ಹಿತ ಮತ್ತು ಸುರಕ್ಷೆಯನ್ನೇ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಆ ನಿಟ್ಟಿನಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಆ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿಧಾನಸೌಧದಲ್ಲಿಂದು ನಡೆದ ಸಭೆಯ ಬಳಿಕ ಸುರೇಶ್ ಕುಮಾರ್ ಹೇಳಿದರು.
ಅಣಕು ಪರೀಕ್ಷಾ ಕೇಂದ್ರ: ಮಕ್ಕಳು ಮತ್ತು ಪೋಷಕರಿಗೆ ಭರವಸೆ ಮೂಡಿಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಕೈಗೊಳ್ಳಲಾದ ಎಲ್ಲ ವ್ಯವಸ್ಥೆ ಮತ್ತು ಸಾಮಾಜಿಕ ಸುರಕ್ಷಾ ಕ್ರಮಗಳನ್ನು ತೋರಿಸುವ ಹಿನ್ನೆಲೆಯಲ್ಲಿ ಪರೀಕ್ಷೆಗಿಂತ ಒಂದು ದಿನ ಮುಂಚೆ ಅಂದರೆ ಜೂ. 24ರಂದು ಬೆಳಗ್ಗೆ 11ರಿಂದ 2 ಗಂಟೆಯವರೆಗೆ ಪರೀಕ್ಷಾ ಕೇಂದ್ರಗಳ ಅಣುಕು ಪ್ರದರ್ಶನ ನಡೆಸಲಾಗುವುದು. ಇದರಲ್ಲಿ ಆಸಕ್ತ ಪೋಷಕರು ಮತ್ತು ಮಕ್ಕಳು ಭಾಗವಹಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಹಾಗೆಯೇ ಆರೋಗ್ಯ, ಗೃಹ, ಸಾರಿಗೆ ಇಲಾಖೆ ಸೇರಿದಂತೆ ಆಯಾ ಸ್ಥಳೀಯಾಡಳಿತಗಳು ಪರೀಕ್ಷೆಗಾಗಿ ಎಲ್ಲ ಕ್ರಮಗಳನ್ನು ಕೈಗೊಂಡಿವೆ. ನಮ್ಮ ಪರೀಕ್ಷೆಯತ್ತ ನ್ಯಾಯಾಲಯಗಳು ಸೇರಿದಂತೆ ಇಡೀ ದೇಶವೇ ನೋಡುತ್ತಿರುವುದರಿಂದ ಪರೀಕ್ಷೆಯ ಯಶಸ್ಸಿಗೆ ಪ್ರತಿಯೊಬ್ಬರೂ ಸಮರ್ಪಣಾ ಮನೋಭಾವದಿಂದ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಪ್ರತ್ಯೇಕ ಕೊಠಡಿ ಪರೀಕ್ಷೆ:ಹೊರ ರಾಜ್ಯಗಳಿಂದ ಬರುವ ಪರೀಕ್ಷಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸುವುದು ಕಂಟೈನ್ಮೆಂಟ್ ಪ್ರದೇಶದಿಂದ ಬರುವ ಮಕ್ಕಳು ಮತ್ತು ಶೀತ, ನೆಗಡಿ, ಜ್ವರದಂತಹ ಲಕ್ಷಣವಿರುವ ಮಕ್ಕಳನ್ನು ಸಹ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕೆಂದು ಸುರೇಶ್ ಕುಮಾರ್ ತಿಳಿಸಿದರು.
ಕೇರಳದ ಕಾಸರಗೋಡು ಜಿಲ್ಲೆಯಿಂದ ಪ್ರತಿದಿನ 367 ವಿದ್ಯಾರ್ಥಿಗಳು ಕೇವಲ 5 ಕಿ.ಮೀ. ಅಂತರದ ಪರೀಕ್ಷಾ ಕೇಂದ್ರಗಳಿಗೆ ಬಂದು ಹೋಗುವುದರಿಂದ ಅವರಿಗೆ ಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಮಾರ್ಗದ ಬಸ್ಗಳನ್ನು ಹೊರತು ಪಡಿಸಿ ವಿಶೇಷವಾಗಿ ತೆಗೆದುಕೊಂಡ ಎಲ್ಲ ಬಸ್ಗಳಿಗೆ ಸಾರಿಗೆ ಇಲಾಖೆ ನಿಗಿದಿಪಡಿಸಿದ ದರದಲ್ಲಿ ಹಣ ಮತ್ತು ಖಾಸಗಿ ಸಂಸ್ಥೆಗಳ ನೀಡಿದ ಬಸ್ಗಳಿಗೆ ಇಂಧನ ವೆಚ್ಚ ನೀಡಲು ಸಚಿವರು ಇನ್ನೆರಡು ದಿನದೊಳಗೆ ಹಣ ಪಾವತಿ ಮಾಡಲು ಸಚಿವರು ಅಧಿಕಾರಿಗಳಿಗೆ ಆದೇಶ ನೀಡಿದರು.