ನವದೆಹಲಿ, ಜೂ 22(DaijiworldNews/PY) : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ಸೋಮವಾರ ತೆರಳಿದ್ದಾರೆ.
ರಕ್ಷಣಾ ಸಚಿವರು ಪ್ರವಾಸದ ಸಂದರ್ಭ ರಷ್ಯಾ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ, ಎರಡನೇ ಮಾಹಾಯುದ್ದದಲ್ಲಿ ಜರ್ಮನಿ ವಿರುದ್ದ ಸೋವಿಯತ್ ಒಕ್ಕೂಟ ವಿಜಯದ 75ನೇ ವರ್ಷಾಚರಣೆ ಅಂಗವಾಗಿ ಮಾಸ್ಕೊದಲ್ಲಿ ನಡೆಯಲಿರುವ ಸೇನೆಯ ಪಥಸಂಚಲನ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ಧಾರೆ.
ಚೀನಾದೊಂದಿಗಿನ ವಿವಾದದ ಹೊರತಾಗಿಯೂ, ರಷ್ಯಾ-ಭಾರತದ ರಕ್ಷಣಾ ಸಂಬಂಧ ಹಾಗೂ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಬಲಗೊಳಿಸುವ ಸಲುವಾಗಿ ರಕ್ಷಣಾ ಸಚಿವರು ಮಾತುಕತೆ ನಡೆಸಲಿದ್ದಾರೆ. ಭಾರತವು ರಷ್ಯಾ ಸೇನೆಯೊಂದಿಗೆ ಉತ್ತಮವಾದ ಬಾಂಧವ್ಯ ಹೊಂದಿದ್ದು, ಅದನ್ನು ಇನ್ನಷ್ಟು ಗಟ್ಟಿಗೊಳಿಸಉವ ನಿಟ್ಟಿನಲ್ಲಿ ರಾಜನಾಥ್ ಸಿಂಗ್ ಅವರು ರಷ್ಯಾಕ್ಕೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವಿದೇಶ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ನಾಲ್ಕು ತಿಂಗಳ ನಂತರ ವಿದೇಶ ಪ್ರವಾಸ ಮಾಡುತ್ತಿರುವುದು ಇದೇ ಮೊದಲು.