ಬೆಂಗಳೂರು, ಜೂ 23 (Daijiworld News/MSP): ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಪತ್ನಿ ಹಾಗೂ ಪುತ್ರಿಗೂ ಕೊವಿಡ್-19 ಸೋಂಕು ಅಂಟಿಕೊಂಡಿದೆ.
ಸೋಮವಾರವಷ್ಟೇ ಡಾ.ಕೆ.ಸುಧಾಕರ್ ಅವರ 82 ವರ್ಷದ ತಂದೆಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಕುಟುಂಬ ಇತರೆ ಸದಸ್ಯರ ರಕ್ತ ಹಾಗೂ ಗಂಟಲು ಸ್ರಾವದ ಮಾದರಿಯನ್ನು ತಪಾಸಣೆಗೆ ಕಳುಹಿಸಿ ಕೊಡಲಾಗಿತ್ತು.ಅವರ ತಂದೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬೆನ್ನಲ್ಲೇ ಇದೀಗ ಪತ್ನಿ ಮತ್ತು ಮಗಳಿಗೂ ಸೋಂಕು ತಗುಲಿದೆ ಎಂದು ಸಚಿವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಮಂಗಳವಾರ ಎಲ್ಲರ ವೈದ್ಯಕೀಯ ತಪಾಸಣಾ ವರದಿಯು ಬಂದಿದ್ದು, "ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ." ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.