ಬೆಂಗಳೂರು, ಜೂ 23 (Daijiworld News/MSP): ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಯಭೀತಗೊಂಡ ಕೆಎಸ್ಆರ್ ಪಿ ಹೆಡ್ ಕಾನ್ಸ್ ಟೇಬಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
50 ವರ್ಷದ ಕೆಎಸ್ಆರ್ ಪಿ ಹೆಡ್ ಕಾನ್ಸ್ ಟೇಬಲ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ಸಂಜೆಯಷ್ಟೇ ದೃಢಪಟ್ಟಿತ್ತು.ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕೆಎಸ್ ಆರ್ ಪಿ ಬಸ್ ನಲ್ಲಿ ಕರೆದೊಯ್ಯುವ ವೇಳೆ ಬಸ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ನಡುವೆ ಪೊಲೀಸ್ ಸಿಬ್ಬಂದಿಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು 55 ವರ್ಷ ಮೇಲ್ಪಟ್ಟ ಸಿಬ್ಬಂದಿಗೆ ಕರ್ತವ್ಯದಿಂದ ವಿನಾಯಿತಿ ನೀಡಿದ್ದು ಮನೆಯಲ್ಲೇ ಇರಬೇಕು. ಯಾವುದೇ ಕಾರಣಕ್ಕೂ ಊರಿಗೆ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.