ಕೋಲ್ಕತ್ತಾ, ಜೂ 23(DaijiworldNews/PY) : ಟೆಕ್ಕಿಯೋರ್ವ ಬೆಂಗಳೂರಿನಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ನಂತರ ಕೋಲ್ಕತ್ತಾಗೆ ತೆರಳಿ ಅಲ್ಲಿ ಅತ್ತೆಯನ್ನು ಗುಂಡಿಕ್ಕಿ ಹತ್ಯೆಗೈದು ಬಳಿಕ ತಾನೂ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಮಿತ್ ಅಗರ್ವಾಲ್ (42) ತನ್ನ ಪತ್ನಿ ಶಿಲ್ಪಿ ಧಂಧಾನಿಯಾ ಅವರನ್ನು ಬೆಂಗಳೂರಿನ ವೈಟ್ಫೀಲ್ಡ್ನ ನಿವಾಸದಲ್ಲಿ ಹತ್ಯೆ ಮಾಡಿ, ಬಳಿಕ ಕೊಲ್ಕತ್ತಾಕ್ಕೆ ಹೋಗಿ ಅತ್ತೆ ಲಲಿತಾ ಧಂಧಾನಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ತಾನು ಶೂಟ್ ಮಾಡಕೊಂಡಿದ್ದಾನೆ.
ಪೊಲೀಸರ ಮಾಹಿತಿಯ ಪ್ರಕಾರ, ಹಲವು ವರ್ಷಗಳ ಹಿಂದೆ ಅಮಿತ್ ಹಾಗೂ ಶಿಲ್ಪಿ ವಿವಾಹವಾಗಿದ್ದರು. ಇಬ್ಬರ ನಡುವೆ ಜಗಳವಾಗಿ ವಿಚ್ಛೇದನ ಪಡೆಯುವ ಹಂತಕ್ಕೆ ತಲುಪಿತ್ತು. ಈ ಕಾರಣದಿಂದ ಕೋಪಗೊಂಡ ಅಮಿತ್ ಮೊದಲು ತನ್ನ ಪತ್ನಿ ಶಿಲ್ಪಿ ಅವರನ್ನು ಹತ್ಯೆ ಮಾಡಿ, ಬಳಿಕ ಪತ್ನಿಯನ್ನು ಹತ್ಯೆ ಮಾಡಿದ ದಿನದಂದೇ ಕೋಲ್ಕತ್ತಾಗೆ ತೆರಳಿ ಅತ್ತೆಯನ್ನು ಶೂಟ್ ಮಾಡಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ಮನೆಯೊಳಗಿದ್ದ ಲಲಿತಾ ಧಂಧಾನಿಯಾ ಅವರ ಪತಿ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.
ಅಮಿತ್ ಅಗರ್ವಾಲ್ ಪತ್ನಿಯನ್ನು ಸೋಮವಾರ ಬೆಳಿಗ್ಗೆ ಹತ್ಯೆ ಮಾಡಿದ್ದಾನೆ. ನಂತರ 5.30 ಸುಮಾರಿಗೆ ಅಮಿತ್ ಕೋಲ್ಕತ್ತಾದ ಫೂಲ್ಬಾಗನ್ ಪ್ರದೇಶದ ತನ್ನ ಅತ್ತೆ-ಮಾವನ ಫ್ಲಾಟ್ಗೆ ಬಂದಿದ್ದು, ಅಲ್ಲಿ ಅವರೊಡನೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿದ್ದು, ಅಮಿತ್ ಗನ್ನಿಂದ ಅತ್ತೆ ಲಲಿತಾ ಧಂಧಾನಿಯಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಸಂದರ್ಭ ಮನೆಯಲ್ಲೇ ಇದ್ದ ಅಮಿತ್ನ ಮಾವ ಮನೆಯಿಂದ ಹೊರಕ್ಕೆ ಓಡಿದ್ದು ಹೊರಗಿನಿಂದ ಲಾಕ್ ಮಾಡಿ ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಆ ವೇಳೆ ಅಮಿತ್ ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.
ಸ್ಥಳಿಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ಮಾಡಿದಾಗ, ಅತ್ತೆ ಹಾಗೂ ಅಳಿಯ ರಕ್ತದ ಮಡುವಿನಲ್ಲಿ ರೂಮಿನೊಳಗೆ ಸತ್ತು ಬಿದ್ದಿರುವುದು ಕಂಡು ಬಂದಿದ್ದು, ಅದೇ ವೇಳೆ ಅಮಿತ್ ಬಳಿ ಡೆತ್ನೋಟ್ ಕೂಡಾ ದೊರಕಿದೆ. ಡೆತ್ನೋಟ್ನಲ್ಲಿ ತನ್ನ ಪತ್ನಿಯನ್ನು ಬೆಂಗಳೂರಿನ ನಿವಾಸದಲ್ಲಿ ಹತ್ಯೆ ಮಾಡಿರುವುದಾಗಿ ಬರೆದಿದ್ದಾನೆ. ಕೂಡಲೇ ಕೊಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಹೋದ ಬೆಂಗಳೂರು ಪೊಲೀಸರು ಅಮಿತ್ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ದೃಢಪಡಿಸಿದ್ದಾರೆ.
ಅಮಿತ್ ಹಾಗೂ ಶಿಲ್ಪಿ ದಂಪತಿಗಳಿಗೆ 10 ವರ್ಷದ ಒಬ್ಬ ಮಗನೂ ಇದ್ದಾನೆ. ಆದರೆ, ಪೊಲೀಸರು ಅವನ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ಆತ ಸುರಕ್ಷಿತವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಮುಗಿದಿದ್ದು, ಘಟನೆಗೆ ಕಾರಣವೇನು ಎನ್ನುವುದನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.