ನವದೆಹಲಿ,ಜೂ 23 (Daijiworld News/MSP): ಅಶ್ವಗಂಧ, ಗಿಲೊಯ್ ಮತ್ತು ತುಳಸಿ ಮಿಶ್ರಣದಿಂದ ತಯಾರಿಸಲಾದ ಕರೊನಾ ವೈರಸ್ ಗುಣಪಡಿಸುವ ಸಾಕ್ಷಿ ಆಧಾರಿತ ಮೊದಲ 'ಕರೊನಿಲ್' ಆಯುರ್ವೇದಿಕ್ ಔಷಧವನ್ನು ಬಾಬಾ ರಾಮದೇವ್ ನೇತೃತ್ವದ ಪತಂಜಲಿ ಆಯುರ್ವೇದಿಕ್ ಸಂಸ್ಥೆಯು ಇಂದು ಬಿಡುಗಡೆ ಮಾಡಿದೆ.
ಬಿಡುಗಡೆ ಬಳಿಕ ಮಾತನಾಡಿದ ಬಾಬಾ ರಾಮ್ ದೇವ್ "ಕರೊನಿಲ್ ಔಷಧವು ರೋಗಿಗಳನ್ನು 5 ರಿಂದ 14 ದಿನಗಳವರೆಗೆ ಗುಣಪಡಿಸಲಿದೆ , ಶೇ. 100 ರಷ್ಟು ಚೇತರಿಕೆ ದರವಿದೆ ಎಂದು ಹೇಳಿದ್ದಾರೆ.
ತಿಂಗಳ ಹಿಂದೆಯೇ ಕೊರೊನಾ ಸೋಂಕು ಗುಣಪಡಿಸುವ ಔಷಧವನ್ನು ಕಂಡು ಹಿಡಿರುವುದಾಗಿ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಅವರು ವಾದಿಸಿದ್ದರು.
ನಮ್ಮವಿಜ್ಞಾನಿಗಳು ತಯಾರಿಸಿದ ಔಷಧವನ್ನು ಸೇವಿಸಿದ 5 ರಿಂದ 14 ದಿನಗಳಲ್ಲಿ ರೋಗಿಗಳ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಮೊದಲಿಗೆ 100 ಕರೊನಾ ರೋಗಿಗಳಲ್ಲಿ ಔಷಧ ಪ್ರಯೋಗಿಸಿ ಶೇ. 100 ರಷ್ಟು ಧನಾತ್ಮಕ ಫಲಿತಾಂಶ ಪಡೆಯಲಾಯಿತು ಆದ್ದರಿಂದ, ಆಯುರ್ವೇದದ ಮೂಲಕ ಕೋವಿಡ್-19ಗೆ ಚಿಕಿತ್ಸೆ ಸಾಧ್ಯ ಎಂದು ನಾವು ಹೇಳಬಹುದಾಗಿದೆ. ಸದ್ಯ ನಾವು ನಿಯಂತ್ರಿತ ಕ್ಲಿನಿಕಲ್ ಪ್ರಯೋಗಗಳನ್ನು ಮಾತ್ರ ಮಾಡುತ್ತಿದ್ದೇವೆ. ಮುಂದಿನ ನಾಲ್ಕೈದು ದಿನಗಳಲ್ಲಿ ಸಾಕ್ಷಿ ಮತ್ತು ಡಾಟಾಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.