ಬೆಂಗಳೂರು, ಜೂ 23(DaijiworldNews/PY) : ವೃತ್ತಿ ಆಧಾರಿತ ಹೊಸ ವೀಸಾಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿಷೇಧ ಹೇರಿದ ಬೆನ್ನಲ್ಲೇ, ನಮಸ್ತೆ ಟ್ರಂಪ್ ಹ್ಯಾಷ್ಟ್ಯಾಗ್ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದ್ದು, ಟ್ರಂಪ್ ಅವರ ಆದೇಶದ ಬಗ್ಗೆ ಸಾವಿರಾರು ಜನ ಟ್ವೀಟ್ ಮಾಡುತ್ತಿದ್ದಾರೆ.
ಹಲವರು ಟ್ವಿಟ್ಟರ್ನಲ್ಲಿ ಟ್ರಂಪ್ ಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ಸಾಕಷ್ಟು ವೆಚ್ಚ ಮಾಡಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿದ್ದೀರಿ, ಎಚ್ 1 ಬಿ ವೀಸಾವನ್ನು ಟ್ರಂಪ್ ಅವರು ಡಿಸೆಂಬರ್ವರೆಗೂ ನಿಷೇಧ ಮಾಡಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಟ್ರಂಪ್ ಅವರ ಹೊಸ ಆದೇಶದಂತೆ ವೃತ್ತಿ ಆಧಾರಿತ ವೀಸಾ ನಿರ್ಬಂಧಿಸುವ ಮೂಲಕ ಐದು ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳು ಅಮೆರಿಕನ್ನರಿಗೆ ದೊರಕಲಿದೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಆದರೆ, ಭಾರತ ಸೇರಿದಂತೆ ವಿದೇಶಿ ನೆಲೆಯವರೇ ಅಮೆರಿಕದ ಐಟಿ ಸೇರಿದಂತೆ ಪ್ರಮುಖವಾದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಟ್ರಂಪ್ ಅವರ ಹೊಸ ಆದೇಶದಿಂದಾಗಿ ಹಲವು ಉದ್ಯೋಗಿಗಳಿಗೆ ಆತಂಕ ಉಂಟಾಗಿದ್ದು, ಅಲ್ಲದೇ, ಅಮೆರಿಕದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ಕನಸು ಹೊಂದಿದ್ದವರಿಗೆ ನಿರಾಶೆಯಾಗಿದೆ.
ಟ್ರಂಪ್ ಅವರ ಹೊಸ ಆದೇಶದಿಂದ ಗೂಗಲ್ ಸಿಇಒ ಸುಂದರ್ ಪಿಚೈ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವೀಟಿಗರು ಇದನ್ನು ಬೆಂಬಲಿಸಿದ್ದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಅವರಿಗಿಂತ ಸುಂದರ್ ಪೀಚೈ ಅವರೇ ಸೂಕ್ತವಾದ ಅಭ್ಯರ್ಥಿ ಎಂದಿದ್ದಾರೆ.
ಇನ್ನು ಈ ವಿಚಾರವಾಗಿ ಹಲವು ಅಭಿಪ್ರಾಯಗಳು ವ್ಯಕ್ತವಾಗಿದ್ದು, ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಕೋಟಿಗಟ್ಟಲೆ ಹಣ ವ್ಯರ್ಥ ಮಾಡುವುದಕ್ಕಿಂತ ಜಗತಿಕ ಸಾಂಕ್ರಾಮಿಕವಾದ ಕೊರೊನಾ ನಿಯಂತ್ರಣಕ್ಕೆ ಆ ಹಣವನ್ನು ಉಪಯೋಗ ಮಾಡಬಹುದಿತ್ತು. ಅಲ್ಲದೇ, ಹೌಡಿ ಮೋದಿ-ನಮಸ್ತೆ ಟ್ರಂಪ್ ಕಾರ್ಯಕ್ರಮಗಳು ವ್ಯರ್ಥ. ಈ ಕಾರ್ಯಕ್ರಮಗಳ ಫಲವಾಗಿ 5.25 ಲಕ್ಷ ಭಾರತೀಯರು ತಮ್ಮ ಕೆಲಸವನ್ನು ಕಳೆದುಕೊಳ್ಳಲಿದ್ದಾರೆ. ಒಂದು ವರ್ಷ ಎಚ್ 1 ಬಿ ವೀಸಾ ನಿಷೇಧ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.