ಬೆಂಗಳೂರು, ಜೂ 23(DaijiworldNews/PY) : ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವಂತೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆಸುವ ಚಿಕಿತ್ಸಾ ದರವನ್ನು ನಿಗದಿಗೊಳಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದ್ದು, ಶೇ.50ರಷ್ಟು ಖಾಸಗಿ ಆಸ್ಪತ್ರೆಗಳ ಹಾಸಿಗೆಗಳನ್ನು ಸರ್ಕಾರಕ್ಕೆ ಮೀಸಲಿಡುವುದನ್ನು ಕಡ್ಡಾಯ ಮಾಡಲಾಗಿದೆ.
ಸಾಂದರ್ಭಿಕ ಚಿತ್ರ
ಈ ಆದೇಶವನ್ನು ಮುಖ್ಯ ಕಾರ್ಯದರ್ಶಿ ಟಿ.ಎಂ.ಭಾಸ್ಕರ್ ಅವರು ಹೊರಡಿಸಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಚಿಕಿತ್ಸೆಗೆಂದು ಕಳುಹಿಸುವ ರೋಗಿಗಳಿಗೆ ದಿನಕ್ಕೆ 5,000 ಜನರಲ್ ವಾರ್ಡ್ಗೆ, ಎಚ್ಡಿಯುಗೆ 7,000, ಐಸಿಯುಗೆ 8,500 ಹಾಗೂ ವೆಂಟಿಲೇಟರ್ ಇರುವ ಐಸಿಯುಗೆ 10,000 ದರ ನಿಗದಿಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ನೇರವಾಗಿ ತೆರಳಿ ಚಿಕಿತ್ಸೆಗೆ ಒಳಪಟ್ಟರೆ ಅವರಿಂದ ವಾರ್ಡ್ಗೆ ದಿನಕ್ಕೆ 10,000, ಎಚ್ಡಿಯುಗೆ 12,000, ಐಸಿಯುಗೆ 15,000 ಹಾಗೂ ವೆಂಟಿಲೇಟರ್ ಸಹಿತ ಐಸಿಯುಗೆ 25,000ಕ್ಕಿಂತ ಹೆಚ್ಚು ಶುಲ್ಕವನ್ನು ವಿಧಿಸುವಂತೆ ಇಲ್ಲ ಎಂದು ತಿಳಿಸಲಾಗಿದೆ.
ಸುವರ್ಣ ಸುರಕ್ಷಾವು ಆರೋಗ್ಯ ಟ್ರಸ್ಟ್ ಬಿಲ್ ಪಾವತಿಯ ನೋಡಲ್ ಏಜೆನ್ಸಿಯಾಗಿದ್ದು, ಈ ಟ್ರಸ್ಟ್, ಬಿಪಿಎಲ್, ಎಪಿಎಲ್, ವಲಸೆ ಕಾರ್ಮಿಕರು ಹಾಗೂ ಪಡಿತರ ಚೀಟಿ ಹೊಂದಿರದೇ ಇತರ ರಾಜ್ಯಗಳಿಂದ ಮರಳಿದವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ವಹಿಸಿಕೊಳ್ಳಲಿದೆ.