ನವದೆಹಲಿ, ಜೂ 23 (Daijiworld News/MSP): ಕೊವೀಡ್ - 19 ಹಿನ್ನಲೆಯಲ್ಲಿ ಭಾರತದಿಂದ ಈ ವರ್ಷ ಹಜ್ಗೆ ಯಾತ್ರಾರ್ಥಿಗಳನ್ನು ಕಳುಹಿಸದಿರಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಖ್ವಿ, ಕೊರೊನಾದಿಂದ ಈ ವರ್ಷ ಅತ್ಯಂತ ಪರಿಮಿತ ಮಟ್ಟದಲ್ಲಿ ಹಜ್ ಯಾತ್ರೆ ನಡೆಸಲು ಸೌದಿ ಅರೇಬಿಯಾ ನಿರ್ಧರಿಸಿದ ಹಿನ್ನೆಲೆಯಲ್ಲಿ, ಈ ವರ್ಷ ಹಜ್ಗೆ ಯಾತ್ರಾರ್ಥಿಗಳನ್ನು ಕಳುಹಿಸದಿರುವ ಕುರಿತು ಕೇಂದ್ರ ಸರ್ಕಾರ ಮಂಗಳವಾರ ನಿರ್ಧಾರ ಪ್ರಕಟಿಸಿದೆ ಎಂದು ತಿಳಿಸಿದ್ದಾರೆ.
ಇನ್ನು ನೋಂದಾಯಿಸಿದ ಭಾರತೀಯ ಯಾತ್ರಾರ್ಥಿಗಳ ಅರ್ಜಿ ಹಣವನ್ನು ನೇರ ವರ್ಗಾವಣೆಯ ಮೂಲಕ ಸಂಪೂರ್ಣ ಹಿಂದಿರುಗಿಸುವುದಾಗಿ ಅವರು ತಿಳಿಸಿದ್ದಾರೆ.
ಪ್ರತಿವರ್ಷ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ , ಜುಲೈ ಅಂತ್ಯದಲ್ಲಿ ಪ್ರಾರಂಭವಾಗುವ ಹಜ್ ತೀರ್ಥಯಾತ್ರೆಗೆ ಈ ಬಾರಿ ಅಲ್ಲಿನ ರಾಜಧಾನಿ ವ್ಯಾಪ್ತಿಯಲ್ಲಿರುವ ಜನರಿಗೆ ಮಾತ್ರ ಅವಕಾಶ ಎಂದು ಸೌದಿ ಅರೇಬಿಯಾ ಅಧಿಕಾರಿಗಳು ಹೇಳಿದ್ದಾರೆ.