ನವದೆಹಲಿ, ಜೂ 23(DaijiworldNews/PY) : 2015ರಿಂದ ಚೀನಾ ಪಡೆಯು ಭಾರತದ ಮೇಲೆ 2,264 ಬಾರಿ ಆಕ್ರಮಣ ನಡೆಸಿದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡುವ ಸಾಹಸಕ್ಕೆ ಜೆ.ಪಿ.ನಡ್ಡಾಅವರು ಹೋಗುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2010 ಮತ್ತು 2013ರಲ್ಲಿ ಚೀನಾವು ಭಾರತದ ಮೇಲೆ 600 ಬಾರಿ ದಾಳಿ ಮಾಡಿರುವ ಬಗ್ಗೆ ವಿವರಣೆ ನೀಡಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೇಳಿದ್ದರು. ಯುಪಿಎ ಸರ್ಕಾರವಿದ್ದ ಸಂದರ್ಭ ಚೀನಾ ದಾಳಿ ನಡೆಸಿತ್ತು. ಆದರೆ, ಭಾರತದ ಯಾವುದೇ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿಲ್ಲ. ಅಲ್ಲದೇ, ಭಾರತೀಯ ಸೈನಿಕರು ಪ್ರಾಣ ಕಳೆದುಕೊಂಡಿಲ್ಲ ಎಂದಿದ್ದಾರೆ.
ಜೆ.ಪಿ.ನಡ್ಡಾ ಅವರು ಇದೇ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಬೇಕು. ಆದರೆ, ಜೆ.ಪಿ. ನಡ್ಡಾ ಅವರು ಪ್ರಧಾನಿ ಮೋದಿ ಅವರೊಂದಿಗೆ ಈ ಪ್ರಶ್ನೆಯನ್ನು ಕೇಳಲು ಹೋಗುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.